ಜಾಲಹಳ್ಳಿ: ಪಟ್ಟಣದ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆಯಲ್ಲಿ ಮಾರಾಟ ಮಾಡಲು ರೈತರು ತಂದಿರುವ ಜಾನುವಾರುಗಳು ಬಿಸಿಲಿನ ತಾಪದಿಂದ ಬಸವಳಿಯುವಂತಾಗಿದೆ.
‘ಸೋಮವಾರದಿಂದಲೇ ಜಾನುವಾರುಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಆದರೆ, ಪಟ್ಟಣದಲ್ಲಿ ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ರೈತರು ಹಾಗೂ ಜಾನುವಾರುಗಳು ತಡೆದುಕೊಳ್ಳಲು ತುಂಬಾ ಕಷ್ಟವಾಗುತ್ತಿದೆ’ ರೈತ ನಾಗರಾಜ ಕಕ್ಕೇರಿ ಹೇಳಿದರು.
ಜಾತ್ರೆ ನಡೆಯುವ ಮೈದಾನದಲ್ಲಿ ಯಾವುದೇ ನೆರಳಿನ ವ್ಯವಸ್ಥೆ ಇಲ್ಲ ಹಾಗೂ ಇಕ್ಕಟ್ಟಾದ ನಿವೇಶನ ಇರುವ ಕಾರಣ ಕಲ್ಮಲಾ- ತಿಂಥಣಿ ಬ್ರಿಜ್ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ರೈತರು ತಮ್ಮ ಜಾನುವಾರುಗಳನ್ನು ಕಟ್ಟಿಕೊಂಡು ಜಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಜಾತ್ರೆಯಲ್ಲಿ ಮಾರಾಟ ಮಾಡಲೆಂದು ದನಗಳ ಸಾಕಾಣಿಕೆ ಮಾಡುತ್ತಿದ್ದರು. ಅದೂ ಈಗ ತುಂಬಾ ಕಡಿಮೆ ಅಗಿರುವುದರಿಂದ ಹೊಸದಾಗಿ ರೈತರು ಎತ್ತುಗಳನ್ನು ಖರೀದಿ ಮಾಡಿ ಬೇಸಾಯ ಮಾಡಲು ಕನಿಷ್ಠವಾದರೂ ₹1 ಲಕ್ಷದಿಂದ ₹2.50 ಲಕ್ಷದವರೆಗೆ ಒಂದು ಜೊತೆ ಎತ್ತುಗಳ ಬೆಲೆ ಇದೆ.
ಈ ವರ್ಷ ಹಿಂಗಾರು-ಮುಂಗಾರು ಮಳೆ ಚೆನ್ನಾಗಿ ಆಗುವ ನಿರೀಕ್ಷೆ ಇರುವುದರಿಂದ ಎತ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದರೂ ರೈತರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಕೆಲ ರೈತರು ಎತ್ತುಗಳನ್ನು ಬದಲಾಯಿಸುವ ದೃಶ್ಯ ಕಂಡುಬಂತು.
ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಉಳುಮೆ ಮಾಡಲು ಎತ್ತುಗಳು ಇರಬೇಕು. ಮನೆಯ ಮುಂದೆ ಎರಡು ಎತ್ತುಗಳು ಇದ್ದರೆ ಮಾತ್ರ ಒಕ್ಕಲುತನದ ಮನೆ ಎಂದು ಗುರುತಿಸುತ್ತಾರೆ.
ಜಾತ್ರೆಯಲ್ಲಿ ಅನ್ನದಾಸೋಹ: ಪಟ್ಟಣದ ತಳವಾರ ಓಣಿಯ ಕೆಲ ರೈತರು ತಮ್ಮ ಜಮೀನುಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತ ಕಟಾವು ಮಾಡಿದ ತಕ್ಷಣವೇ ದೇವರ ಹೆಸರಲ್ಲಿ ಸ್ವಲ್ಪ ಭಾಗವನ್ನು ತೆಗೆದು ಸಂಗ್ರಹ ಮಾಡಿ ಜಾತ್ರೆಯಲ್ಲಿ ವಿವಿಧ ಗ್ರಾಮಗಳಿಂದ ಬರುವಂತಹ ರೈತರಿಗೆ ಅನ್ನದಸೋಹ ಮಾಡಲಾಗುತ್ತದೆ. ಸೋಮವಾರ ದಾಸೋಹಕ್ಕೆ ಚಾಲನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.