ADVERTISEMENT

ರಾಯಚೂರಿನಲ್ಲಿ ಐಐಐಟಿ: ಕೇಂದ್ರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 12:34 IST
Last Updated 5 ಫೆಬ್ರುವರಿ 2019, 12:34 IST
ರಾಯಚೂರು ತಾಲ್ಲೂಕು ವಡವಾಟಿ ಗ್ರಾಮದ ಪಕ್ಕದಲ್ಲಿ ಐಐಐಟಿ ಸ್ಥಾಪಿಸಲು ಮೀಸಲಿಟ್ಟ ಜಾಗಕ್ಕೆ ಕೇಂದ್ರದ ಅಧಿಕಾರಿಗಳ ತಂಡವು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು
ರಾಯಚೂರು ತಾಲ್ಲೂಕು ವಡವಾಟಿ ಗ್ರಾಮದ ಪಕ್ಕದಲ್ಲಿ ಐಐಐಟಿ ಸ್ಥಾಪಿಸಲು ಮೀಸಲಿಟ್ಟ ಜಾಗಕ್ಕೆ ಕೇಂದ್ರದ ಅಧಿಕಾರಿಗಳ ತಂಡವು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು   

ರಾಯಚೂರು: ಕೇಂದ್ರದಿಂದ ಮಂಜೂರಿಯಾದ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸ್ಥಾಪನೆ ಸಂಬಂಧವಾಗಿ ಒಂದು ವರ್ಷದ ಬಳಿಕಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಸ್.ಎಸ್.‌ಸಂಧು‌ ನೇತೃತ್ವದಲ್ಲಿ ಅಧಿಕಾರಿಗಳ ತಂಡವೊಂದು ಮಂಗಳವಾರ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಲ್ಲೂಕಿನ ವಡವಾಟಿ ಗ್ರಾಮ ಪಕ್ಕದಲ್ಲಿ ಮೀಸಲಿಟ್ಟ 65 ಎಕರೆ ಜಾಗಕ್ಕೆ ಅಧಿಕಾರಿಗಳೊಂದಿಗೆ ತೆರಳಿ ಮಾಹಿತಿ ಪಡೆದು, ಆನಂತರ ಸಭೆ ನಡೆಸಿದರು.

ನೀರಿನ ಲಭ್ಯತೆ, ಕಟ್ಟಡ‌ ನಿರ್ಮಾಣವಾಗಲಿರುವ ಜಾಗದ‌ ಮಣ್ಣಿನ ವಿವರ ಹಾಗೂ ಸಾರಿಗೆ ವ್ಯವಸ್ಥೆಯ ಕುರಿತು ಜಿಲ್ಲಾಡಳಿತ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಂಡದಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್‌ ಸಿ.ಎನ್‌.ರಾಯ್‌, ಸಹಾಯಕ ಎಂಜಿನಿಯರ್‌ ಕೆ.ಎಂ. ಸುರೇಶ ಇದ್ದರು.

ADVERTISEMENT

ರಾಜ್ಯ ಐಟಿಬಿಟಿ ಇಲಾಖೆಯ ನಿರ್ದೇಶಕ ಆರ್‌.ಗಿರೀಶ್‌, ಧಾರವಾಡದ ಐಐಐಟಿ ಪ್ರಾಧ್ಯಾಪಕ ದೀಪಕ್‌, ಬೆಂಗಳೂರು ಐಐಐಟಿ ಕಾರ್ಯನಿರ್ವಾಹಕ ಅದಿಕಾರಿ ಜಗದೀಶ ಪಾಟೀಲ, ಕಾಂಚಿಪುರ ಐಐಐಟಿಯ ಬಾಸಿಂದರ್‌ ಮಾಚಿ ಅವರೂ ಭೇಟಿ ನೀಡಿದರು.

ರಾಯಚೂರಿನಲ್ಲಿ ಐಐಐಟಿ ಸ್ಥಾಪಿಸಲು 2018 ರ ಜನವರಿ 25 ರಂದು ಕೇಂದ್ರವು ಮಂಜೂರಾತಿ ನೀಡಿತ್ತು. 2018–19 ಶೈಕ್ಷಣಿಕ ಸಾಲಿನಿಂದ ಕಾಲೇಜು ಆರಂಭಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಒಂದು ವರ್ಷದ ಬಳಿಕ ಪ್ರಕ್ರಿಯೆ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.