ರಾಯಚೂರು: ‘ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿಗಣತಿ ಮಾಡುವ ಅಧಿಕಾರವಿದೆ. ಜಯಪ್ರಕಾಶ ಹೆಗ್ಡೆ ಅವರ ವರದಿ ರಾಜ್ಯದ ಜನರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ವರದಿಯಾಗಿದೆ. ಇದು ಜಾತಿ ಜನಗಣತಿ ಅಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದರು.
‘ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಅರಿತುಕೊಳ್ಳಲು ಈ ಹಿಂದೆ ಕಾಂತರಾಜ್ ನೇತೃತ್ವದ ಸಮಿತಿ ವರದಿ ಸಲ್ಲಿಸಿತು. ಅದರಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲು ಜಯಪ್ರಕಾಶ ಹೆಗ್ಡೆ ಅವರನ್ನು ನೇಮಿಸಿ ಅವರಿಂದ ಸಂಪೂರ್ಣ ವರದಿ ತರಿಸಿಕೊಳ್ಳಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಸಿಂಧನೂರಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.
‘ವರದಿಯಲ್ಲಿ ಏನಿದೆ ಎನ್ನುವ ಬಗ್ಗೆ ಬಹಳಷ್ಟು ಜನ ಸರಿಯಾಗಿ ತಿಳಿದುಕೊಂಡಿಲ್ಲ. ಸರಿಯಾಗಿ ಅರ್ಥೈಸಿಕೊಳ್ಳದೇ ಪರ-ವಿರೋಧದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.
ದ್ವೇಷದ ರಾಜಕಾರಣ: ‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರಿಗೆ ಕರ್ನಾಟಕ ಅಂದರೆ ಸಿಟ್ಟು. ಕಾರಣ ವಿಧಾನಸಭಾ ಚುನಾವಣೆಯಲ್ಲಿ 36 ಬಾರಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದರೂ ರಾಜ್ಯದ ಜನರು ಬಿಜೆಪಿಯನ್ನು ತಿರಸ್ಕರಿಸಿದರು. ಕಾಂಗ್ರೆಸ್ ಬೆಂಬಲಿಸಿದರು. ಜನರ ಮೇಲಿನ ಸಿಟ್ಟಿನಿಂದಾಗಿ ರಾಜ್ಯದ ಪಾಲಿನ ಜಿಎಸ್‌ಟಿ, ಬರ ಪರಿಹಾರ ಹಣ ಕೊಟ್ಟಿಲ್ಲ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ’ ತಂಗಡಗಿ ಆರೋಪಿಸಿದರು.
‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಬಹುತೇಕ ಸಚಿವರು ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಬಿಜೆಪಿಯ ಎಲ್ಲರೂ ಕ್ರಿಮಿನಲ್‌ಗಳೇ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಇಲ್ಲ. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಎಚ್‌ಡಿಕೆ ಮೊದಲು ರಾಜೀನಾಮೆ ನೀಡಲಿ’ ಎಂದರು.
‘ಬಿಜೆಪಿ ಮುಖಂಡರು ರಾಜಭವನವನ್ನು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ರಾಜ್ಯಪಾಲರನ್ನು ಬಳಸಿಕೊಂಡು ಮುಖ್ಯಮಂತ್ರಿಗಳ ಮೇಲೆ ಪಿತೂರಿ ನಡೆಸಿದ್ದಾರೆ. ಮುಡಾದಲ್ಲಿ ಹಗರಣ ಆಗಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸುಳ್ಳೇ ಬಿಜೆಪಿಗರ ಮನೆದೇವರು’ ಎಂದು ಟೀಕಿಸಿದರು.
ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.