ADVERTISEMENT

ತಿಂಗಳ ನಂತರ ಚನ್ನಬಸವನ ಕೊಳೆತ ದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 16:48 IST
Last Updated 14 ನವೆಂಬರ್ 2020, 16:48 IST

ಮಸ್ಕಿ: ಮಸ್ಕಿ ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಚನ್ನಬಸವ ಮಡಿವಾಳ (36) ಅವರ ಕೊಳೆತದೇಹ ತಿಂಗಳ ನಂತರ ಶನಿವಾರ ಮಧ್ಯಾಹ್ನ ಪಟ್ಟಣದ ಹಳ್ಳದಲ್ಲಿ ಮುಳ್ಳಿನ ಪೊದೆಯಲ್ಲಿ ಪತ್ತೆಯಾಗಿದೆ.

ಹಳ್ಳದಲ್ಲಿನ ತುಂಗಭದ್ರಾ ಎಡದಂಡೆ ಕಾಲುವೆಯ ಸೇತುವೆ ಬಳಿ ಮೀನು ಹಿಡಿಯಲು ಹೋಗಿದ್ದ ಯುವಕರಿಗೆ ಕೊಳೆತ ದೇಹದ ವಾಸನೆ ಬಂದಿದೆ. ಕೂಡಲೇ ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ಮಾಡಿದ್ದಾರೆ. ಕೂಡಲೇ ಸಬ್ ಇನ್‌ಸ್ಪೆಕ್ಟರ್ ಸಣ್ಣ ವೀರೇಶ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದು ಚನ್ನಬಸವ ಮಡಿವಾಳ ಅವರ ಶವ ಎಂದು ಗುರುತಿಸಲಾಗಿದೆ ಎಂದು ವೀರೇಶ ತಿಳಿಸಿದ್ದಾರೆ.

ಅ. 11 ರಂದು ಮಸ್ಕಿ ಜಲಾಶಯದಿಂದ ಹೆಚ್ಚಿನ ನೀರು ಹಳ್ಳಕ್ಕೆ ಬಿಟ್ಟಿದ್ದರಿಂದ ಹಳ್ಳದಲ್ಲಿ ಸಿಲುಕಿದ್ದ ಚನ್ನಬಸವನನ್ನು ರಕ್ಷಣೆ ಮಾಡುವ ವೇಳೆ ಹಗ್ಗ ತುಂಡಾಗಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ. ತಾಲ್ಲೂಕು ಆಡಳಿತ 15 ದಿನಗಳವರೆಗೆ ಶೋಧ ನಡೆಸಿದ್ದರು. ಚನ್ನಬಸವ ಪತ್ತೆಯಾಗದ ಕಾರಣ ಕಾರ್ಯಚರಣೆ ಸ್ಥಗಿತಗೊಳಿಸಿತ್ತು. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರವಾಹಕ್ಕೆ ಕೊಚ್ಚಿ ಹೋಗಿ ತಿಂಗಳ ನಂತರ ಕೊಳೆತ ದೇಹ ಪತ್ತೆಯಾಗಿದೆ.

ADVERTISEMENT

ಚನ್ನಬಸವನ ಕುಟುಂಬದಲ್ಲಿ ದುಖಃ ಮಡುಗಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.