ADVERTISEMENT

ಗ್ರಾಮೀಣ ರಸ್ತೆಗಳ ನಿರ್ವಹಣೆ ‘ಸುಮಾರ್ಗ’

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವ ಕೃಷ್ಣ ಭೈರೇಗೌಡ ವಿವರಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 12:49 IST
Last Updated 5 ಜುಲೈ 2019, 12:49 IST
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ   

ರಾಯಚೂರು: ಗ್ರಾಮೀಣ ಭಾಗದಲ್ಲಿ ಇಲ್ಲಿಯವರೆಗೂ ವಿವಿಧ ಯೋಜನೆಗಳಡಿ ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡುವ ಕೆಲಸವನ್ನೇ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ರಸ್ತೆಗೆಳ ನಿರ್ವಹಣೆ ಆಗುತ್ತಿಲ್ಲ. ಇದಕ್ಕಾಗಿ ರಾಜ್ಯದಲ್ಲಿ ‘ಮುಖ್ಯಮಂತ್ರಿ ಸುಮಾರ್ಗ’ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಯರಮರಸ್‌ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ, ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆ, ನಮ್ಮ ಹೊಲ–ನಮ್ಮ ರಸ್ತೆ.. ಹೀಗೆ ಅನೇಕ ಯೋಜನೆಗಳಡಿ ರಾಜ್ಯದಾದ್ಯಂತ ಒಟ್ಟು 54 ಸಾವಿರ ಕಿಲೋ ಮೀಟರ್‌ ಗ್ರಾಮೀಣ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆಗಳು ಯಾವ ಸ್ಥಿತಿಯಲ್ಲಿವೆ ಎಂಬುದರ ಬಗ್ಗೆ ಗಮನ ಹರಿಸುವ ಕೆಲಸವಾಗುತ್ತಿಲ್ಲ. ಇದಕ್ಕಾಗಿ ಮುಖ್ಯಮಂತ್ರಿ ಸುಮಾರ್ಗ ಯೋಜನೆ ಘೋಷಿಸಲಾಗಿದ್ದು, ಆದ್ಯತೆ ಅನುಸಾರ ಮೊದಲ ಹಂತದಲ್ಲಿ 25 ಸಾವಿರ ಕಿಲೋ ಮೀಟರ್‌ ರಸ್ತೆಗಳ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಗ್ರಾಮಗಳಲ್ಲಿರುವ ಶಾಲೆ, ಕಾಲೇಜು, ಗ್ರಾಮ ಪಂಚಾಯಿತಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಆದ್ಯತೆ ರಸ್ತೆಗಳೆಂದು ಪರಿಗಣಿಸಲಾಗಿದೆ. ಪ್ರತಿ ಗ್ರಾಮಕ್ಕೂ ಎಂಜಿನಿಯರುಗಳು ಭೇಟಿ ನೀಡಿ ರಸ್ತೆ ಸ್ಥಿತಿಗತಿ ಪರಿಶೀಲಿಸಿ ಗ್ರೇಡಿಂಗ್‌ ಅಂಕಗಳನ್ನು ನೀಡಲಿದ್ದಾರೆ. ಈ ಕೆಲಸ ಜುಲೈ 20 ರೊಳಗಾಗಿ ಪೂರ್ಣಗೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರತಿ ಶಾಸಕರಿಗೂ ಈ ಬಗ್ಗೆ ಪತ್ರ ಬರೆಯಲಾಗಿದ್ದು, ಅವರ ಅಭಿಮತ ಪಡೆದುಕೊಂಡು ಸಮಗ್ರ ಯೋಜನೆ (ಡಿಪಿಆರ್‌) ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು. ಯೋಜಿತ ರಸ್ತೆಯಲ್ಲಿ ಐದು ಸಾವಿರ ಕಿಲೋ ಮೀಟರ್ ಸುಸ್ಥಿತಿಯಲ್ಲಿದೆ. ಮೊದಲ ವರ್ಷ ಎಂಟು ಸಾವಿರ ಕಿಲೋ ಮೀಟರ್‌, ಎರಡನೇ ವರ್ಷ ಏಳು ಸಾವಿರ ಕಿಲೋ ಮೀಟರ್‌ ಹಾಗೂ ಮೂರನೇ ವರ್ಷ 5 ಸಾವಿರ ಕಿಲೋ ಮೀಟರ್‌ ರಸ್ತೆಗಳ ನಿರ್ವಹಣೆ ಮಾಡಲಾಗುವುದು. ರಸ್ತೆಗಳ ಮರು ನಿರ್ಮಾಣ, ಗುಂಡಿಗಳ ದುರಸ್ತಿ ಕಾರ್ಯ ಈ ಯೋಜನೆಯಲ್ಲಿದೆ ಎಂದು ಹೇಳಿದರು.

ಯೋಜನೆ ಜಾರಿಗಾಗಿ ಒಟ್ಟು ₹7,180 ಕೋಟಿ ವೆಚ್ಚವಾಗುವ ಅಂದಾಜಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಹಣಕಾಸಿನ ನೆರವನ್ನು ₹2 ಸಾವಿರ ಕೋಟಿಯಷ್ಟು ಪಡೆದುಕೊಳ್ಳಲಾಗುವುದು. ಕೇಂದ್ರ ಸರ್ಕಾರದ ಮುಂದೆ ಯೋಜನೆಯನ್ನು ಮಂಡಿಸಬೇಕಾಗುತ್ತದೆ. ಹೀಗಾಗಿ ಪ್ರತಿ ಹಂತದಲ್ಲೂ ಮಾನದಂಡಗಳನ್ನು ನಿಗದಿಪಡಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಶಾಸಕರಾದ ಡಿ.ಎಸ್‌.ಹುಲಗೇರಿ, ಬಸನಗೌಡ ದದ್ದಲ, ಪ್ರತಾಪಗೌಡ ಪಾಟೀಲ, ರಾಜಾ ವೆಂಕಟಪ್ಪ ನಾಯಕ, ವಿಧಾನ ಪರಿಷತ್‌ ಸದಸ್ಯರಾದ ಎನ್‌.ಎಸ್‌. ಬೋಸರಾಜು, ಬಸವರಾಕ ಪಾಟೀಲ ಇಟಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿನ ನಲಿನ್‌ ಅತುಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.