ADVERTISEMENT

ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಳಪೆ ಕಾಮಗಾರಿ ಆರೋಪ: ಡಿಸಿ ಭೇಟಿಗೆ ಆಗ್ರಹ

ಜಾಲಹಳ್ಳಿ ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 13:04 IST
Last Updated 26 ಮಾರ್ಚ್ 2025, 13:04 IST
ಜಾಲಹಳ್ಳಿ ಪಟ್ಟಣ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಿಟಕಿ ದುರಸ್ತಿ ಮಾಡುತ್ತಿರುವುದು
ಜಾಲಹಳ್ಳಿ ಪಟ್ಟಣ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಿಟಕಿ ದುರಸ್ತಿ ಮಾಡುತ್ತಿರುವುದು   

ಜಾಲಹಳ್ಳಿ: ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹1.25 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕ್ರಿಯಾ ಯೋಜನೆಯ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈಚೆಗೆ ಈ ಕಾಮಗಾರಿಗಳಿಗೆ ಶಾಸಕಿ ಕರೆಮ್ಮ ಜಿ.ನಾಯಕ ಚಾಲನೆ ನೀಡಿ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಬೇಕು ಎಂದು ಭೂಸೇನಾ ನಿಗಮದ ಎಂಜಿನಿಯರ್ ಹನುಮಯ್ಯ ನಾಯಕ ಅವರಿಗೆ ತಾಕೀತು ಮಾಡಿದ್ದರು.

ಪ್ರಮುಖವಾಗಿ 50 ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ₹25 ಲಕ್ಷ, ಶಾಲೆ ಬಾಗಿಲು–ಕಿಟಕಿಗಳ ಬದಲಾವಣೆಗೆ ₹50 ಲಕ್ಷ, ವಿದ್ಯುತ್ ವೈರಿಂಗ್ ಬದಲಾವಣೆಗೆ ₹26.80 ಲಕ್ಷ, ಶೌಚ ಗುಂಡಿ ನಿರ್ಮಾಣಕ್ಕೆ ₹10.50 ಲಕ್ಷ, ಲಿಂಗದಹಳ್ಳಿ ಮುಖ್ಯ ರಸ್ತೆಯಿಂದ ಶಾಲೆಗೆ ಸಂಪರ್ಕಿಸಲು ಕಿರು ಸೇತುವೆ ನಿರ್ಮಾಣಕ್ಕೆ ₹5 ಲಕ್ಷ, ಪೆಂಬರ್ ಕಾಮಗಾರಿಗಾಗಿ ₹7.50 ಲಕ್ಷ ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ADVERTISEMENT

ಬಾಗಿಲು, ಕಿಟಕಿ ಬದಲಾವಣೆ ಮಾಡದೇ ಹಳೆ ಕಿಟಕಿಗಳನ್ನು ದುರಸ್ತಿ ಮಾಡಲಾಗುತ್ತಿದೆ. ಓವರ್ ಹೆಡ್ ಟ್ಯಾಂಕ್ ನಿರ್ಮಿಸದೇ ನೆಲಮಳಿಗೆಯಲ್ಲಿ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಕಳಪೆ ಗುಣಮಟ್ಟದ ವೈರ್ ಬಳಕೆ ಮಾಡಲಾಗುತ್ತಿದೆ.  ಶೌಚ ಗುಂಡಿಗಳನ್ನು ವಸತಿ ಶಾಲೆ ಕಟ್ಟಡಕ್ಕಿಂತಲೂ ಕನಿಷ್ಠ 6ರಿಂದ 8 ಅಡಿ ಆಳದಲ್ಲಿ ನಿರ್ಮಿಸಬೇಕು. ಕೇವಲ ಮೂರು ಅಡಿ ಅಳದಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗುಂಡಿಗೆ‌ ಬಳಕೆ ಮಾಡಲಾಗುತ್ತಿರುವ ಸಾಮಗ್ರಿಗಳು ತುಂಬಾ ಕಳಪೆ ಮಟ್ಟದಿಂದ ಕೂಡಿವೆ ಎಂದು ಮಕ್ಕಳ ಪಾಲಕರಾದ ಸಿದ್ದಪ್ಪ ನಾಯಕ, ಸೋಮಶೇಖರ ದೂರಿದ್ದಾರೆ.

25 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಟ್ಟಣದ ಬಹುತೇಕ ಬಾಗಿಲು–ಕಿಟಕಿ, ಶೌಚ ಗುಂಡಿಗಳು, ವಿದ್ಯುತ್ ವೈರಿಂಗ್ ಸಂಪೂರ್ಣವಾಗಿ ಹಾಳಾಗಿದೆ. ಕಾರಣ ಶಾಸಕಿ ಅನುದಾನ ಒದಗಿಸಿ ಕಾಮಗಾರಿಯನ್ನು ಭೂಸೇನಾ ನಿಗಮ‌ಕ್ಕೆ ವಹಿಸಲಾಗಿದೆ. ಕಾಮಗಾರಿ ಪ್ರಾರಂಭಗೊಂಡು ಒಂದು ತಿಂಗಳು ಕಳೆದರೂ ಒಂದು ದಿನ ಕೂಡ ಸ್ಥಳಕ್ಕೆ ಎಂಜಿನಿಯರ್ ಭೇಟಿ ನೀಡದೇ ಬೇಜವಾಬ್ದಾರಿ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಮಗಾರಿಯ ಗುಣಮಟ್ಟದಿಂದ ನಿರ್ವಹಣೆ ಮಾಡಲಾಗುತ್ತಿದೆ. ಕ್ರಿಯಾ ಯೋಜನೆ ಉಲ್ಲೇಖಿಸಿರುವ ಸಾಮಗ್ರಿಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ
ಹನುಮಯ್ಯ ನಾಯಕ, ಭೂಸೇನಾ ನಿಗಮದ ಸಹಾಯಕ ಎಂಜಿನಿಯರ್ ದೇವದುರ್ಗ ವಿಭಾಗ

ಶಾಲೆ ನಿರ್ಮಾಣವಾಗಿ 25 ವರ್ಷ ಕಳೆದರೂ ದುರಸ್ತಿಯಲ್ಲಿ ಸುಣ್ಣ–ಬಣ್ಣ ಹಾಗೂ ರಕ್ಷಣ ಗೋಡೆ ದುರಸ್ತಿ ಕುರಿತು ಕ್ರಿಯಾ ಯೋಜನೆಯಲ್ಲಿ ಸೇರಿಸಿಲ್ಲ. ಭೂಸೇನಾ ನಿಗಮದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ತಕ್ಷಣವೇ ಕಾಮಗಾರಿ ಸ್ಥಳಕ್ಕೆ‌ ಭೇಟಿ ನೀಡಿ‌ ಪರಿಶೀಲಿಸಬೇಕು ಎಂದು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಜಾಲಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶೌಚ ಗುಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.