ADVERTISEMENT

ರಾಯಚೂರು: 16 ರಂದು ಚಿತ್ರಕಲಾ ಸಂತೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 9:12 IST
Last Updated 4 ಫೆಬ್ರುವರಿ 2020, 9:12 IST
ಮಾರುತಿ ಬಡಿಗೇರ, ಕಲಾಸಂಕುಲ ಸಂಸ್ಥೆ ಕಾರ್ಯದರ್ಶಿ
ಮಾರುತಿ ಬಡಿಗೇರ, ಕಲಾಸಂಕುಲ ಸಂಸ್ಥೆ ಕಾರ್ಯದರ್ಶಿ   

ರಾಯಚೂರು:ನಗರದ ಕಲಾ ಸಂಕುಲ ಸಂಸ್ಥೆಯಿಂದ ಫೆಬ್ರುವರಿ 16 ರಂದು ಚಿತ್ರಕಲಾ ಸಂತೆ ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಆಯೋಜಿಸಿದ್ದ ಚಿತ್ರಕಲಾ ಸಂತೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 60 ಕಲಾವಿದರು ಭಾಗಿಯಾಗಿದ್ದರು. ಈ ವರ್ಷವೂ ವಿವಿಧ ರಾಜ್ಯಗಳಿಂದ ಕಲಾವಿದರು ಭಾಗಿಯಾಗಲಿದ್ದು, ಚಿತ್ರಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದರು.

ರಂಗಮಂದಿರ ಮುಂಭಾಗದಲ್ಲಿರುವ ಸಾರ್ವಜನಿಕ ಉದ್ಯಾನದ ಎದುರು ಮಳಿಗೆಗಳನ್ನು ಹಾಕಲಾಗುವುದು. ದಿ. ಶಂಕರಗೌಡ ಬೆಟ್ಟದೂರು ಅವರ ಹೆಸರಿನಲ್ಲಿ ಚಿತ್ರಸಂತೆ ಆಯೋಜಿಸಲಾಗುತ್ತಿದ್ದು, ಸಂಸದ ರಾಜಾ ಅಮರೇಶ್ವರ ನಾಯಕ ಅವರು ಉದ್ಘಾಟಿಸುವರು. ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು.

ADVERTISEMENT

ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು, ಕಲಾಸಕ್ತರೆಲ್ಲರೂ ಚಿತ್ರಕಲೆ ಸಂತೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಾಯಚೂರಿನಲ್ಲಿಯೂ ಸಾಕಷ್ಟು ಸುಪ್ರಸಿದ್ಧ ಕಲಾವಿದರಿದ್ದು, ಅವರ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕಿದೆ. ಏಕಕಾಲಕ್ಕೆ ಎಲ್ಲ ಕಲಾವಿದರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ವಿಶೇಷ ದಿನ ಅದಾಗಲಿದೆ ಎಂದು ಹೇಳಿದರು.

ಒಂದು ಕಲಾಕೃತಿಯು ನೂರಾರು ಭಾವನೆಗಳನ್ನು ಹುಟ್ಟುಹಾಕುತ್ತದೆ. ಇಷ್ಟಪಡುವ ಕಲಾಕೃತಿಗಳನ್ನು ಖರೀದಿಸಬಹುದಾಗಿದೆ. ನೂತನ ಕಟ್ಟಡಗಳು, ಕಚೇರಿಗಳಿಗೆ ಸುಂದರ ಚಿತ್ರಕಲಾಕೃತಿಗಳು ಜೀವಂತಿಕೆ ತರುತ್ತದೆ. ಕುಟುಂಬ ಸಮೇತರಾಗಿ ಚಿತ್ರಸಂತೆಗೆ ಬರಬೇಕು ಎಂದು ಮನವಿ ಮಾಡಿದರು.

ಹೊರ ಜಿಲ್ಲೆಗಳಿಂದ ಬರುತ್ತಿರುವ ಚಿತ್ರಕಲಾವಿದರಿಗೆ ರಾಯಚೂರಿನ ಕುರಿತು ಹೊಸ ನಿರೀಕ್ಷೆಗಳಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರೆ ಮಾತ್ರ ಕಲಾಸಂತೆಗೆ ವಿಶೇಷ ಮೆರುಗು ಎಂದರು.

ಅಮರೇಗೌಡ, ಈರಣ್ಣ ಬೆಂಗಾಲಿ, ದೇವರಾಜ ಕುರ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.