ADVERTISEMENT

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆಗೆ ಸುದರ್ಶನ ಪ್ರಚೋದನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 20:06 IST
Last Updated 17 ಜುಲೈ 2019, 20:06 IST

ರಾಯಚೂರು:ನಗರದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಐಡಿ ತಂಡವು ಜೆಎಂಎಫ್‌ಸಿ ನ್ಯಾಯಾಧೀಶರಿಗೆ ಮಂಗಳವಾರ 1,068 ಪುಟಗಳ ವರದಿ ಸಲ್ಲಿಸಿದ್ದು, ವಿದ್ಯಾರ್ಥಿನಿಯದ್ದು ಆತ್ಮಹತ್ಯೆಯಾಗಿದೆ ಎಂದು ಅದರಲ್ಲಿ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಮೃತಳ ಸ್ನೇಹಿತ ಆರೋಪಿ ಸುದರ್ಶನ ಬಿನ್‌ ಬಜಾರಪ್ಪ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 63 ಸಾಕ್ಷಿದಾರರು ಮತ್ತು 45 ದಾಖಲೆಗಳನ್ನು ನ್ಯಾಯಾಧೀಶರಿಗೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದಾರೆ.

ಪ್ರೀತಿ, ಪ್ರೇಮದ ವಿಚಾರವಾಗಿ ಆರೋಪಿ ಸುದರ್ಶನ್‌, ಮೃತ ವಿದ್ಯಾರ್ಥಿನಿಗೆ ನಿರಂತರ ಕಿರುಕುಳ ಕೊಡುತ್ತಿದ್ದ ಎಂಬುದು ಸಿಐಡಿ ವರದಿಯಲ್ಲಿದೆ.

ADVERTISEMENT

ಪಾಲಕರ ಭೇಟಿ: ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಬಳಿಕ ಸಿಐಡಿ ಅಧಿಕಾರಿಗಳು, ಮೃತ ವಿದ್ಯಾರ್ಥಿನಿಯ ಪಾಲಕರನ್ನು ಭೇಟಿ ಮಾಡಿದ್ದಾರೆ. ವಿದ್ಯಾರ್ಥಿನಿಯದ್ದು ಕೊಲೆಯಲ್ಲ, ಆತ್ಮಹತ್ಯೆಯಾಗಿದೆ ಎಂಬುದಕ್ಕೆ ಸಂಗ್ರಹಿಸಿದ ದಾಖಲೆಗಳು ಮತ್ತು ಪರೀಕ್ಷಾ ವರದಿಗಳ ಅಂಶಗಳ ಬಗ್ಗೆಯೂ ವಿವರಿಸಿ ಹೇಳಿದ್ದಾರೆ.

ಏಪ್ರಿಲ್‌ 13 ರಂದು ಮನೆಯಿಂದ ಹೊರಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಶವವು 15 ರಂದು ಪತ್ತೆಯಾಗಿತ್ತು. ಮರುದಿನವೇ ಆರೋಪಿ ಸುದರ್ಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಷಯವು ಸಾಕಷ್ಟು ಚರ್ಚೆಗೆ ಗ್ರಾಸವಾದ ಬಳಿಕ ಏಪ್ರಿಲ್‌ 18 ರಂದು ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.