ಸಿಂಧನೂರು: ತುಂಗಭದ್ರಾ ಜಲಾಶಯದ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‍ಸೆಟ್ ಹಾಗೂ ಪೈಪ್‍ಲೈನ್‍ಗಳನ್ನು ನೀರಾವರಿ ಅಧಿಕಾರಿಗಳು ತಕ್ಷಣವೇ ತೆರವುಗೊಳಿಸಿ, ನೀರುಗಳ್ಳರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಮಾರಲದಿನ್ನಿ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವಡ್ಡರಹಟ್ಟಿನಿಂದ ಯರಮರಸ್ ಡಿವಿಜನ್‍ವರೆಗೂ 20 ಸಾವಿರಕ್ಕೂ ಅಧಿಕ ಅಕ್ರಮ ಪೈಪ್‍ಲೈನ್‍ಗಳಿದ್ದು, ರಾಜಕೀಯ ಪಕ್ಷಗಳ ಮುಖಂಡರು, ಪ್ರಭಾವಿಗಳು ಸಾವಿರಾರು ಎಕರೆ ಅಕ್ರಮ ನೀರಾವರಿ ಮಾಡಿಕೊಂಡಿದ್ದಾರೆ. ಈ ಕುರಿತು ನೀರಾವರಿ ಅಧಿಕಾರಿಗಳ ಗಮನಕ್ಕಿದ್ದರೂ ಸಹ ಯಾವುದೇ ಕ್ರಮಕೈಗೊಳ್ಳದೇ ಮೌನವಹಿಸಿದ್ದಾರೆ. ಜಿಲ್ಲಾಧಿಕಾರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಹತ್ತು ದಿನದೊಳಗೆ ಈ ಕೆಲಸ ಮಾಡದಿದ್ದರೆ ಸಿಂಧನೂರಿನಿಂದ ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿ ಕಚೇರಿಯವರೆಗೆ ಬೈಕ್ ರ‍್ಯಾಲಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಹುಲುಗಯ್ಯ ಮಾತನಾಡಿ, ಬಿತ್ತನೆ ಕಾರ್ಯ ಆರಂಭವಾಗುತ್ತಿದ್ದಂತೆ ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಠಿಸುವ ಕೆಲಸ ಮಾಡುತ್ತಾರೆ. ಜೊತೆಗೆ ಬಿಳಿ ಹಾಳೆಯಲ್ಲಿ ಚೀಟಿ ಬರೆದು ಕೊಡುತ್ತಾರೆ. ಇವರೊಂದಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಶಾಮೀಲಾಗಿದ್ದಾರೆ. ಕೂಡಲೇ ಎಲ್ಲ ವ್ಯಾಪಾರಸ್ಥರ ಸಭೆ ಕರೆದು ಬೀಜ, ರಸಗೊಬ್ಬರಗಳ ದರಪಟ್ಟಿಯ ನಾಮಫಲಕ ಹಾಕುವಂತೆ, ಜಿಎಸ್‍ಟಿ ಬಿಲ್‍ನಲ್ಲಿ ಬರೆದು ಕೊಡುವಂತೆ ಸೂಚಿಸಬೇಕು. ಜೊತೆಗೆ ಪಂಪ್‍ಸೆಟ್ ರೈತರಿಗೆ ಪ್ರತಿನಿತ್ಯ 10 ತಾಸು ಹಗಲೊತ್ತಿನಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಮುಖಂಡರಾದ ದೇವಣ್ಣ ಬೂದಿಹಾಳ, ಸಲೀಂ ಪಾಟೀಲ್ ಹಟ್ಟಿ, ಶ್ಯಾಮೀದ್‍ಸಾಬ ಮುಳ್ಳೂರು, ಹುಸೇನಪ್ಪ ಬಾದರ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.