ADVERTISEMENT

ರಾಯಚೂರು: ಮೋಡ ಕವಿದ ವಾತಾವರಣ, ದಿನವಿಡೀ ದರ್ಶನ ನೀಡದ ಸೂರ್ಯ

ಕೆಲಹೊತ್ತು ತುಂತುರು ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 2:59 IST
Last Updated 30 ನವೆಂಬರ್ 2021, 2:59 IST
ರಾಯಚೂರು ನಗರದಲ್ಲಿ ಸೋಮವಾರ ತುಂತುರು ಮಳೆ ಸುರಿಯಿತು
ರಾಯಚೂರು ನಗರದಲ್ಲಿ ಸೋಮವಾರ ತುಂತುರು ಮಳೆ ಸುರಿಯಿತು   

ರಾಯಚೂರು: ಜಿಲ್ಲೆಯಲ್ಲಿ ಸೋಮವಾರ ದಿನವಿಡೀ ಸೂರ್ಯನ ದರ್ಶನವಾಗಲಿಲ್ಲ. ಮಬ್ಬು ಆವರಿಸಿಕೊಂಡಿತ್ತು.

ಬೆಳಗಿನ ಜಾವ ಚುಮು ಚುಮು ಚಳಿ ಇತ್ತು. ಮಧ್ಯಾಹ್ನ ಸ್ವಲ್ಪ ತಗ್ಗಿದರೂ ಬಿಸಿಲು ಬೀಳಲಿಲ್ಲ. ಶೀತಗಾಳಿ ಬೀಸುತ್ತಿದ್ದರಿಂದ ಎಂದಿನಂತೆ ಮಾರುಕಟ್ಟೆಯಲ್ಲಿ ಹಾಗೂ ರಸ್ತೆಗಳಲ್ಲಿ ಜನಸಂಚಾರ ಕಂಡುಬರಲಿಲ್ಲ. ಚಳಿಯಿಂದ ರಕ್ಷಿಸಿಕೊಳ್ಳಲು ಜನರು ಜಾಕೇಟ್‌, ಸ್ವೇಟರ್‌ ಮೊರೆ ಹೋಗಿರುವುದು ಕಂಡುಬಂತು.

ತಂಪು ಆವರಿಸಿದ್ದರಿಂದ ವಯೋವೃದ್ಧರು, ಅನಾರೋಗ್ಯದಿಂದ ಬಳಲುವವರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಯಿತು.

ADVERTISEMENT

‘ಸದಾ ಬಿಸಿಲಿನ ವಾತಾವರಣ ಅನುಭವಿಸುವ ರಾಯಚೂರು ಜನರಿಗೆ ತಂಪುಗಾಳಿಯಿಂದಾಗಿ ಅನಾರೋಗ್ಯ ಸಮಸ್ಯೆ ಸಾಮಾನ್ಯವಾಗುತ್ತಿದೆ. ಅದರಲ್ಲೂ ಚಿಕ್ಕಮಕ್ಕಳಿಗೆ ಶೀತ, ಜ್ವರ ಕಾಣಿಸಿಕೊಳ್ಳುತ್ತಿವೆ’ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

ಮಳೆ ಸುರಿಯುವ ರೀತಿಯಲ್ಲೇ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣ ಮುಂದುವರಿದಿತ್ತು. ಸಂಜೆ ಕೆಲಹೊತ್ತು ತುಂತುರು ಹನಿಗಳು ಸುರಿದವು. ಆದರೆ, ನೀರು ಹರಿದು ಹೋಗುವಂತೆ ಜೋರಾಗಿರಲಿಲ್ಲ. ವಾಯುವಿಹಾರ, ಸಂಜೆ ಮಾರುಕಟ್ಟೆಗೆ ಹೋಗುವುದಕ್ಕೆ ಯೋಜನೆ ಮಾಡಿಕೊಂಡಿದ್ದ ಜನರು ಮನೆಗಳಲ್ಲೇ ಉಳಿದುಕೊಳ್ಳು ವಂತಾಯಿತು. ಹವಾಮಾನ ಮುನ್ಸೂಚನೆ ಪ್ರಕಾರ, ಇನ್ನೂ ಎರಡು ದಿನ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ.

ರೈತರನ್ನು ಕಂಗೆಡಿಸಿದ ಮಳೆ: ಜಿಲ್ಲೆಯಲ್ಲಿ ಕೆಲಹೊತ್ತು ತುಂತುರು ಮಳೆ ಸುರಿದಿದ್ದರಿಂದ ರೈತರು ಆತಂಕ ಪಡುವಂತಾಗಿದೆ.

ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದ ಅಳಿದುಳಿದ ಹತ್ತಿ, ಭತ್ತ, ಮೆಣಸಿನಕಾಯಿ, ತೊಗರಿ ಫಸಲು ಸಂಪೂರ್ಣ ಕೈಬಿಟ್ಟು ಹೋಗುತ್ತದೆ ಎನ್ನುವ ಆತಂಕ ರೈತರಲ್ಲಿ ಶುರುವಾಗಿದೆ. ಈಗಷ್ಟೇ ನೆಲದಲ್ಲಿ ತೇವಾಂಶ ಕಡಿಮೆಯಾಗಿದ್ದರಿಂದ ರೈತರು ಹೊಲಗಳಲ್ಲಿಯ ಹತ್ತಿ ಬಿಡಿಸಿಕೊಂಡು ಮಾರುಕಟ್ಟೆಗೆ ತೆಗೆದುಕೊಂಡು ಬರುವ ಯೋಚನೆಯಲ್ಲಿದ್ದರು.

ಈಗ ಮತ್ತೆ ತಂಪಾದ ವಾತಾವರಣ ನಿರ್ಮಾಣವಾಗಿರು ವುದರಿಂದ ತುಂತುರು ಮಳೆಹನಿಗಳು ಶುರುವಾಗಿದ್ದರಿಂದ ಕೃಷಿಕಾರ್ಯಗಳಿಗೆ ಅನಾನುಕೂಲ ಹೆಚ್ಚಾಗುತ್ತಿದೆ ಎಂದು ರೈತರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.