ADVERTISEMENT

ರಾಯಚೂರು: ಉಪ ಚುನಾವಣೆ ಪ್ರಚಾರ ಆರಂಭಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 12:41 IST
Last Updated 20 ಮಾರ್ಚ್ 2021, 12:41 IST
ಮಸ್ಕಿ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಮೂಲಕ ಸಿಂಧನೂರಿನ ಹೆಲಿಪ್ಯಾಡ್‌ಗೆ ಬಂದಿಳಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ಮಸ್ಕಿ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಮೂಲಕ ಸಿಂಧನೂರಿನ ಹೆಲಿಪ್ಯಾಡ್‌ಗೆ ಬಂದಿಳಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ   

ರಾಯಚೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉಪಚುನಾವಣೆ ಪ್ರಚಾರ ಕಾರ್ಯವನ್ನು ರಾಯಚೂರಿನ ಮಸ್ಕಿ ಕ್ಷೇತ್ರದಿಂದ ಅಧಿಕೃತವಾಗಿ ಆರಂಭಿಸಿದ್ದಾರೆ.

ಮಸ್ಕಿ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ ಸಿಂಧನೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

‘ಕೋವಿಡ್ ಸಮಯದಲ್ಲೂ ಅಭಿವೃದ್ಧಿ ಪರ ಬಜೆಟ್ ಮಂಡನೆ ಮಾಡಿರುವುದು ಮತ್ತು ನೀರಾವರಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊಂಡು ಉಪಚುನಾವಣೆ ಪ್ರಚಾರ ಮಾಡುತ್ತೇವೆ’ ಎಂದರು.

‘ಉಪಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಿ ದೆಹಲಿಗೆ ಪಟ್ಟಿ ಕಳುಹಿಸಲಾಗಿದೆ. ನಾಳೆಯೇ ಅಂತಿಮಪಟ್ಟಿ ಹೊರಬರಲಿದೆ. ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗಳಲ್ಲಿ ಗೆಲ್ಲಲೇಬೇಕು. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ’ ಎಂದು ಹೇಳಿದರು.

‘ಮಸ್ಕಿ ಕ್ಷೇತ್ರದಲ್ಲಿ 5ಎ ಕಾಲುವೆಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಯಲ್ಲೂ ಮಾತುಕತೆ ನಡೆಸಲಾಗುವುದು. ಯಾವುದೇ‌ ವ್ಯಕ್ತಿಯನ್ನು ನೋಡದೆ, ಪಕ್ಷ ನೋಡಿ ಮತ ನೀಡಲು ಮನವರಿಕೆ ಮಾಡುತ್ತೇವೆ’ ಎಂದರು.

ಸಂಖ್ಯಾಮಿತಿಯಿಲ್ಲ: ‘ಕೋವಿಡ್ ನಿಯಮಪಾಲನೆ ಪಾಲನೆಗೆ ಒಳಾಂಗಣ ಸಮಾರಂಭಕ್ಕೆ ಸಂಖ್ಯಾಮಿತಿ ಇದೆ; ಬಹಿರಂಗವಾಗಿ ಆಯೋಜಿಸುವ ಕಾರ್ಯಕ್ರಮಗಳಿಗೆ ಸಂಖ್ಯಾ ಮಿತಿ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಂಡು ಆರೋಗ್ಯವಂತರಾಗಿರಬೇಕು. ಅಂತರಪಾಲನೆ, ಮಾಸ್ಕ್ ಧರಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಲಕ್ಷಗಟ್ಟಲೆ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಹೀಗಾಗಿ ಚುನಾವಣೆ ಬಹಿರಂಗ ಕಾರ್ಯಕ್ರಮಗಳಿಗೆ ಕೋವಿಡ್ ನಿಯಮ ಇರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT