ADVERTISEMENT

ಬಿಸಿಲಿನ ತಾಪ: ಎಳನೀರು ಬೆಲೆ ಹೆಚ್ಚಳ

ಅಮರೇಶ ನಾಯಕ
Published 9 ಏಪ್ರಿಲ್ 2022, 19:30 IST
Last Updated 9 ಏಪ್ರಿಲ್ 2022, 19:30 IST
ಹಟ್ಟಿಪಟ್ಟಣದ ಕ್ಯಾಂಪ್ ಪ್ರದೇಶದಲ್ಲಿನ ಎಳನೀರು ಮಾರಾಟ ಅಂಗಡಿ
ಹಟ್ಟಿಪಟ್ಟಣದ ಕ್ಯಾಂಪ್ ಪ್ರದೇಶದಲ್ಲಿನ ಎಳನೀರು ಮಾರಾಟ ಅಂಗಡಿ   

ಹಟ್ಟಿಚಿನ್ನದಗಣಿ: ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಎಂದಿನಂತೆ ಎಳನೀರಿಗೆ ಬೇಡಿಕೆಯು ಹೆಚ್ಚಾಗಿದ್ದು, ಹೀಗಾಗಿ ಸಹಜವಾಗಿಯೇ ಅದರ ದರದಲ್ಲಿಯೂ ಹೆಚ್ಚಳವಾಗಿದೆ.

ಏಪ್ರಿಲ್‌ ತಿಂಗಳಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಜನರು ದಾಹ ತಣಿಸಿಕೊಳ್ಳಲು ತಂಪು ಪಾನೀಯ ಕಲ್ಲಂಗಡಿ, ಕರಬುಜ ಹಣ್ಣಿನ ಜ್ಯೂಸ್ ಮಜ್ಜಿಗೆ ಲಸ್ಸಿ, ಲಿಂಬು ಶರಬತ್‌ನಂತಹ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.

ಪಟ್ಟಣದಲ್ಲಿ ಅನೇಕರು ಬಿಸಿಲಿನ ದಾಹ ತಣಿಸಿಕೊಳ್ಳಲು ಎಳನೀರಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಹಳೆ ಬಸ್ ನಿಲ್ದಾಣ, ಕ್ಯಾಂಪ್ ಬಸ್ ನಿಲ್ದಾಣ, ಪೋಲಿಸ್ ಠಾಣೆ ಹತ್ತಿರ ನಿಲ್ದಾಣಗಳಲ್ಲಿ ಎಳನೀರು ಅಂಗಡಿಗಳು ಕಡಿಮೆ ಇವೆ. ಹೀಗಾಗಿ ಎಳನೀರಿಗೆ ಭಾರಿ ಬೇಡಿಕೆ ಬಂದಿದೆ.

ADVERTISEMENT

‘ಕಳೆದ ವರ್ಷ ಒಂದು ಎಳನೀರಿಗೆ ₹ 30 ರಿಂದ ₹ 35 ಇತ್ತು. ಆದರೆ ಪ್ರಸಕ್ತ ವರ್ಷ ಬೇಸಿಗೆ ಆರಂಭಗೊಂಡಿದ್ದು ಈಗ ಒಂದು ಎಳನೀರಿಗೆ ₹ 40 ರಿಂದ ₹ 45 ಇದೆ. ಒದೊಮ್ಮೆ ಎಳನೀರು ಕಾಯಿಗಳ ಲಾರಿ ಬರದಿದ್ದರೆ ಅಂಗಡಿಯಲ್ಲಿನ ಒಂದು ಎಳನೀರಿನ ಕಾಯಿಗೆ ₹ 50ಕ್ಕೆ ಮಾರಿದ್ದೇವೆ‘ ಎನ್ನುತ್ತಾರೆ ಎಳನೀರು ವ್ಯಾಪಾರಿ ಸಿದ್ದಪ್ಪ.

ಎಳನೀರು ಕಾಯಿಗಳನ್ನು ಮಂಡ್ಯ, ಮದ್ದೂರು, ತುಮಕೂರು, ಹಾಸನ, ಜಿಲ್ಲೆಗಳಿಂದ ತರಿಸುತ್ತೇವೆ. ಮಂಡ್ಯ, ಮದ್ದೂರು ಎಳನೀರು ಕಾಯಿಗೆ ಭಾರಿ ಬೇಡಿಕೆ ಇದೆ. ಇದಲ್ಲದೆ ನೆರೆಯ ರಾಜ್ಯದ ಸೀಮಾಂದ್ರ, ತೆಲಗಾಣದಿಂದಲೂ ಎಳನೀರು ತರಿಸುತ್ತೇವೆ. ತೆಲಂಗಾಣದ ಕಾಯಿಗಳು ಚಿಕ್ಕದಾಗಿದ್ದು ನೀರು ಸ್ವಲ್ಪ ಉಪ್ಪಾಗಿರುವುದರಿಂದ ಬೇಡಿಕೆ ಕಡಿಮೆ ಎನ್ನುತ್ತಾರೆ ವ್ಯಾಪಾರಿ.

ಎಳನೀರು ಬೆಲೆ ಭಾರಿ ಏರಿಕೆಯಾಗಿದ್ದು, ಬಡರೋಗಿಗಳು ಎಳನೀರು ಕುಡಿಯಲು ಹಿಂದೆ, ಮುಂದೆ ನೋಡುವಂತಾಗಿದೆ. ರೋಗಿಗಳನ್ನು ಮಾತನಾಡಿಸಲು ಹೋಗುವ ಸಂಬಂದಿಕರು, ಸ್ನೇಹಿತರು ಎಳನೀರು ಒಯ್ಯುತ್ತಿದ್ದರು. ಈಗ ಅವರು ಕೂಡ ಎಳನೀರು ಖರೀದಿಸುತ್ತಿಲ್ಲ ಎನ್ನುತ್ತಾರೆ ಅವರು.

ಮಂಡ್ಯ, ಮದ್ದೂರು ಜಿಲ್ಲೆಗಳಿಂದ ಒಂದು ಎಳನೀರು ಕಾಯಿಗೆ ₹ 28ರಿಂದ ₹ 32ಕ್ಕೆ ನಾವು ತರಿಸುತ್ತೇವೆ ಇಲ್ಲಿ ₹ 40 ರಿಂದ ₹ 45 ಕ್ಕೆ ಮಾರಾಟ ಮಾಡುತ್ತೇವೆ
- ಸಿದ್ದಪ್ಪ. ಎಳನೀರು ವ್ಯಾಪಾರಿ.

ಮಂಡ್ಯ, ಮದ್ದೂರಿನಿಂದ ಎಳನೀರು ಕಾಯಿ ತಂದುಕೊಡುತ್ತೇವೆ. ಕೂಲಿ ಕಾರ್ಮಿಕರ ಖರ್ಚು ಹಾಗೂ ಡೀಸೆಲ್ ದರ ಹೆಚ್ಚಾಗಿದ್ದರಿಂದಾಗಿ ಸಹಜವಾಗಿಯೇ ಎಳನೀರು ಬೆಲೆ ಹೆಚ್ಚಾಗಿದೆ
- ಲಕ್ಷಣಗೌಡ, ಮಂಡ್ಯ ಜಿಲ್ಲೆಯ ಲಾರಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.