ADVERTISEMENT

ಪಾಳು ಬಿದ್ದ ವಾಣಿಜ್ಯ ಮಳಿಗೆ: ಆದಾಯ ಖೋತಾ

ಲಿಂಗಸುಗೂರು; ಅನುದಾನದ ಇದ್ದರೂ ಪುರಸಭೆ ಅಧಿಕಾರಿಗಳಿಗೆ ಆಸಕ್ತಿ ಕೊರತೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:37 IST
Last Updated 1 ಮಾರ್ಚ್ 2026, 6:37 IST
ಲಿಂಗಸುಗೂರು ಪಟ್ಟಣದ ಪೊಲೀಸ್ ಠಾಣೆ ಎದುರು ಪಾಳು ಬಿದ್ದಿರುವ ವಾಣಿಜ್ಯ ಮಳಿಗೆಗಳು
ಲಿಂಗಸುಗೂರು ಪಟ್ಟಣದ ಪೊಲೀಸ್ ಠಾಣೆ ಎದುರು ಪಾಳು ಬಿದ್ದಿರುವ ವಾಣಿಜ್ಯ ಮಳಿಗೆಗಳು   

ಲಿಂಗಸುಗೂರು: ಪಟ್ಟಣದ ಪೊಲೀಸ್ ಠಾಣೆ ಎದುರು ನಿರ್ಮಿಸಿದ ವಾಣಿಜ್ಯ ಮಳಿಗೆಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದರಿಂದ ಪುರಸಭೆಗೆ ಆರ್ಥಿಕ ನಷ್ಟ ಉಂಟಾಗಿದೆ.

ಪಟ್ಟಣದ ಪುರಸಭೆ ಕಚೇರಿ ಪಕ್ಕ, ಎದುರು, ಬಸ್ ನಿಲ್ದಾಣದ ಬಳಿ ಸೇರಿ ಒಟ್ಟು 52 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ 35 ವಾಣಿಜ್ಯ ಮಳಿಗೆಗಳನ್ನು 1996ರಲ್ಲಿ ಐಡಿಎಸ್ಎಂಸಿ ಯೋಜನೆಯಡಿಯಲ್ಲಿ, ಪುರಸಭೆ ಅನುದಾನದಲ್ಲಿ 5 ಹಾಗೂ ಎಸ್ಎಫ್ ಸಿ ಅನುದಾನದಲ್ಲಿ 12 ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.

20 ಮಳಿಗೆಗಳು ಪಾಳು: ಐಡಿಎಸ್ಎಂಸಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿದ 35 ವಾಣಿಜ್ಯ ಮಳಿಗೆಗಳಲ್ಲಿ ಕನಿಷ್ಠವೆಂದರೂ 20 ವಾಣಿಜ್ಯ ಮಳಿಗೆಗಳಲ್ಲಿ ಪಾಳು ಬಿದ್ದಿವೆ. ಆರಂಭದಲ್ಲಿ ಎಲ್ಲಾ ಮಳಿಗೆಗಳನ್ನು ಹರಾಜು ಮಾಡಿ ಬಾಡಿಗೆ ನೀಡಲಾಗಿತ್ತು. ಆದರೆ ಮಳಿಗೆಗಳ ನಿರ್ವಹಣೆಗೆ ಪುರಸಭೆ ಅಧಿಕಾರಿಗಳು ಆಸಕ್ತಿ ತೋರದ ಕಾರಣ ಬಾಡಿಗೆದಾರರು ಒಬ್ಬಬ್ಬರಾಗಿ ಮಳಿಗೆಗಳನ್ನು ಖಾಲಿ ಮಾಡಿದ್ದಾರೆ. ಅನೇಕ ವರ್ಷಗಳಿಂದ ಮಳಿಗೆಗಳು ಖಾಲಿಯಿವೆ, ರಾತ್ರಿ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. 20 ಮಳಿಗೆಗಳು ಸುಮಾರು ವರ್ಷಗಳಿಂದ ಪಾಳು ಬಿದ್ದಿದ್ದರಿಂದ ಈ ಮಳಿಗೆಗಳಿಂದ ಬಾಡಿಗೆರೂಪದಲ್ಲಿ ಬರುತ್ತಿದ್ದ ಆದಾಯ ಈಗ ಇಲ್ಲದೆ ಪುರಸಭೆಗೆ ಆರ್ಥಿಕ ನಷ್ಟ ಎದುರಾಗಿದೆ.

ADVERTISEMENT

ದುಡ್ಡು ಇದ್ದರೂ ಆಸಕ್ತಿಯಿಲ್ಲ: ಪಾಳು ಬಿದ್ದಿರುವ ವಾಣಿಜ್ಯ ಮಳಿಗೆಗಳ ದುರಸ್ತಿಪಡಿಸಿಲು ಅನುದಾನದ ಕೊರತೆ ಇಲ್ಲ ಆದರೆ ಇಲ್ಲಿನ ಪುರಸಭೆ ಅಧಿಕಾರಿಗಳಿಗೆ ಆಸಕ್ತಿ ಕೊರತೆ ಇದೆ. ಮಳಿಗೆ ದುರಸ್ತಿಪಡಿಸಿ ಹರಾಜು ನಡೆಸಿದ್ದರೆ ಈಗಾಗಲೇ ಹಲವರು ವ್ಯಾಪಾರ ಉದ್ಯೋಗಕ್ಕೂ ಅವಕಾಶ ಸಿಗುತ್ತಿತ್ತು ಪುರಸಭೆಗೂ ಆದಾಯ ಲಭಿಸುತ್ತಿತ್ತು. ಮಳಿಗೆಗಳನ್ನು ದುರಸ್ತಿ ಮಾಡುವುದಾಗಿ ಅನೇಕ ವರ್ಷಗಳಿಂದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ ಅದು ಕಾರ್ಯರೂಪಕ್ಕೆ ಬರದಾಗಿದೆ ಮಳಿಗೆಗಳು ಇದರಿಂದ ಪಾಳು ಬಿದ್ದಿವೆ.

52 ವಾಣಿಜ್ಯ ಮಳಿಗೆಗಳಲ್ಲಿ ಕೆಲವು ಮಳಿಗೆಗಳನ್ನು ಇತ್ತೀಚಿನ ವರ್ಷದಲ್ಲಿ ಹರಾಜು ಮಾಡಲಾಗಿದೆ, ಇನ್ನೂ ಕೆಲವು ಮಳಿಗೆಗಳನ್ನು ಹರಾಜು ಮಾಡದೇ ಅನೇಕ ವರ್ಷಗಳು ಕಳೆಯುತ್ತಿದ್ದರೂ ಇನ್ನೂವರೆಗೂ ಹರಾಜು ಮಾಡಿಲ್ಲ, ಕಡಿಮೆ ಬಾಡಿಗೆ ಹಣದಲ್ಲಿ ಮಳಿಗೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ, ದುರಸ್ತಿ ಇರುವ ವಾಣಿಜ್ಯ ಮಳಿಗೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಹಾಗೂ ಬಹುವರ್ಷಗಳಿಂದ ಹರಾಜು ಮಾಡಲಾರದ ಮಳಿಗೆಗಳನ್ನು ಮರುಹರಾಜು ಮಾಡಲು ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಕರವೇ ತಾಲ್ಲೂಕು ಅಧ್ಯಕ್ಷ ಅಂಜನೇಯ ಭಂಡಾರಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.