ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್: ಪೊಲೀಸ್ ಠಾಣೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 2:58 IST
Last Updated 5 ಫೆಬ್ರುವರಿ 2022, 2:58 IST
ಸಿಂಧನೂರಿನ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ವೀರಶೈವ ಸಮುದಾಯದ ಯುವಕರ ಗುಂಪು ಶುಕ್ರವಾರ ಪ್ರತಿಭಟನೆ ನಡೆಸಿತು
ಸಿಂಧನೂರಿನ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ವೀರಶೈವ ಸಮುದಾಯದ ಯುವಕರ ಗುಂಪು ಶುಕ್ರವಾರ ಪ್ರತಿಭಟನೆ ನಡೆಸಿತು   

ಸಿಂಧನೂರು (ರಾಯಚೂರು ಜಿಲ್ಲೆ):‘ಸಮುದಾಯವೊಂದನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಯುವಕ ಪೋಸ್ಟ್ ಹಾಕಿದ್ದಾನೆ’ ಎಂದು ಆರೋಪಿಸಿ ಸಹಸ್ರಾರು ಜನರು ಶುಕ್ರವಾರ ಸಂಜೆ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹುಮನಾಬಾದ್‍ನಲ್ಲಿ ತಹಶೀಲ್ದಾರ್ ಮೇಲೆ ನಡೆದ ಹಲ್ಲೆ ಖಂಡಿಸಿ ವೀರಶೈವ ಸಮುದಾಯದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಯಿತು. ಸಭೆಯ ನಂತರ ಮನವಿಪತ್ರ ಸಲ್ಲಿಸಿ ಪ್ರತಿಭಟನಾಕಾರರು ತೆರಳಿದ್ದರು.

ಸಾಸಲಮರಿ ಗ್ರಾಮದ ಯುವಕ ಪ್ರತಿಭಟನೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿಆಕ್ಷೇಪಾರ್ಹ ಪೋಸ್ಟ್‌ ಹಾಕಿರುವುದು ವೈರಲ್ ಆಗಿದೆ.

ADVERTISEMENT

ಇದನ್ನು ಗಮನಿಸಿದ ಕೆಲವರು ಗುಂಪುಗೂಡಿ ಗಾಂಧಿಸರ್ಕಲ್‍ಗೆ ಬಂದು ಪ್ರತಿಭಟನೆ ನಡೆಸಿದರು. ಆಕ್ಷೇಪಾರ್ಹ ಪೋಸ್ಟ್ ಮಾಡಿದ ಯುವಕನನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು. ನಂತರ ಪೊಲೀಸ್ ಠಾಣೆಗೆ ತೆರಳಿ, ಮುತ್ತಿಗೆ ಹಾಕಿದರು.

ವೀರಶೈವ ಸಮುದಾಯದ ಮುಖಂಡರಾದ ಬಸವರಾಜ ನಾಡಗೌಡ, ಬಾಬುಗೌಡ ಬಾದರ್ಲಿ, ಅಶೋಕಗೌಡ ಗದ್ರಟಗಿ, ಬಸನಗೌಡ ಬಾದರ್ಲಿ ಅವರು ಪೊಲೀಸ್ ಠಾಣೆಗೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಯುವಕನನ್ನು ಠಾಣೆಗೆ ಕರೆತರುವ ತನಕ ತಾವು ತೆರಳುವುದಿಲ್ಲ ಎಂದು ಉದ್ರಿಕ್ತರು ಪಟ್ಟು ಹಿಡಿದರು.

ಡಿವೈಎಸ್‍ಪಿ ವೆಂಕಟಪ್ಪ ನಾಯಕ, ಸಿಪಿಐ ಉಮೇಶ ಕಾಂಬ್ಳೆ, ಪಿಎಸ್‍ಐ ಸೌಮ್ಯಾ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮಾಡಿದ ಪ್ರಯತ್ನ ಫಲಿಸಲಿಲ್ಲ.

ವೀರಶೈವ ಸಮಾಜದ ಸಿಂಧನೂರು ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕಗೌಡ ಗದ್ರಟಗಿ ಅವರು ನೀಡಿದ ದೂರಿನ ಅನ್ವಯ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ ಯುವಕ ಗಣೇಶ ವಿರುದ್ಧ ‘ಸಮುದಾಯವನ್ನು ಅಪಮಾನಿಸಿದ’ ಬಗ್ಗೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡರು. ನಂತರ ಪ್ರತಿಭಟನಾಕಾರರು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.