ರಾಯಚೂರು: ನರೇಗಾ ಅನುದಾನ ದುರ್ಬಳಕೆ, ನಿಯಮ ಉಲ್ಲಂಘನೆ, ಪಾರದರ್ಶಕತೆ ಕೊರತೆ ಹಾಗೂ ಮಾನವ ದಿನಗಳ ಸೃಜನೆ ವಿಷಯದಲ್ಲಿ ಅನೇಕ ದೂರುಗಳು ಬಂದಿರುವ ಕಾರಣ ಕೇಂದ್ರದ ಮೂವರ ಅಧಿಕಾರಿಗಳ ತಂಡ ಸೋಮವಾರ ಜಿಲ್ಲೆಗೆ ಆಗಮಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕ ಪಿ.ಶಿವಶಂಕರ, ಯೋಜನಾ ಅಧಿಕಾರಿ ಅವನೀಂದ್ರಕುಮಾರ, ಕೇಂದ್ರ ಗ್ರಾಮೀಣ ನಿರ್ವಹಣೆಯ ಸಿ.ವಿ.ಬಾಲಮುರಳಿ ರಾಯಚೂರಿಗೆ ಬಂದಿದ್ದಾರೆ.
ಅಧಿಕಾರಿಗಳ ತಂಡ ಏಪ್ರಿಲ್ 26ರವರೆಗೂ ತಾಲ್ಲೂಕಿನ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಲಿದೆ. ತಂಡ ಈಗಾಗಲೇ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಪಾಂಡ್ವೆ ಅವರನ್ನು ಭೇಟಿ ಮಾಡಿ ಒಂದಿಷ್ಟು ಮಾಹಿತಿ ಪಡೆದುಕೊಂಡಿದೆ.
‘ಆರ್ಥಿಕ ಸ್ವಾವಲಂಬನೆಗೆ ನರೇಗಾ ಸಹಕಾರಿ’: ‘ನರೇಗಾ ಕಾಮಗಾರಿ ಎಲ್ಲ ಸಮುದಾಯದ ಜನರಿಗೂ ಆರ್ಥಿಕ ಸ್ವಾವಲಂಬನೆಗೆ ನೆರವಾಗಿದೆ’ ಎಂದು ಐಇಸಿ ಜಿಲ್ಲಾ ಸಂಯೋಜಕ ವಿಶ್ವನಾಥ ಹೇಳಿದರು.
ರಾಯಚೂರು ತಾಲ್ಲೂಕಿನ ಎಲ್.ಕೆ.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸದಿಡ್ಡಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು.
ಏಪ್ರಿಲ್ 1ರಿಂದ ನರೇಗಾ ಕೂಲಿ ₹370ಗೆ ಹೆಚ್ಚಳವಾಗಿದ್ದು, ಗಂಡು–ಹೆಣ್ಣಿಗೆ ಸಮಾನ ಕೂಲಿ ನೀಡಲಾಗುತ್ತದೆ. ಇದರಿಂದ ಕೂಲಿಕಾರರು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಬರಬೇಕು. ವಲಸೆ ಹೋಗುವುದು ನಿಲ್ಲಬೇಕು. ಯೋಜನೆಯಡಿ 65 ವರ್ಷ ಮೇಲ್ಪಟ್ಟ ವೃದ್ಧರಿಗೆ, ಅಂಗವಿಕಲರಿಗೆ ಹಾಗೂ ಗರ್ಭಿಣಿಯರಿಗೆ ಶೇ 50ರಷ್ಟು ಕೆಲಸ ಮಾಡಿದರೂ ಪೂರ್ತಿ ಪ್ರಮಾಣದ ಕೂಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಎರಡು ಸಲ ಎನ್.ಎಂ.ಎಂ.ಎಸ್ ಹಾಜರಾತಿ ಕಡ್ಡಾಯವಾಗಿ ಮಾಡಬೇಕು ಎಂದರು.
ರಾಯಚೂರು ತಾಲ್ಲೂಕು ಸಂಯೋಜಕ ಧನರಾಜ ಹಾಗೂ ದೇವಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.