ರಾಯಚೂರು: ‘ಶತ ಶತಮಾನಗಳ ಶೋಷಣೆ, ಅಸಮಾನತೆ, ದಬ್ಬಾಳಿಕೆ ತಡೆಗೆ ಸಂಘರ್ಷವೇ ಪರಿಹಾರ ಎನ್ನುವುದು ಸಾಹಿತಿ ಬಾಬು ಭಂಡಾರಿಗಲ್ ಅವರ ಕೃತಿಯಲ್ಲಿ ಒಡಮೂಡಿದೆ. ಇದು ಸತ್ಯವೂ ಆಗಿದೆ’ ಎಂದು ಕವಿ ದಾನಪ್ಪ ನೀಲಗಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕ, ಭಂಡಾರಿ ಪ್ರಕಾಶನದ ಆಶ್ರಯದಲ್ಲಿ ಏರ್ಪಡಿಸಿದ್ದ ಬಂಡಾಯ ಸಾಹಿತಿ ಬಾಬು ಭಂಡಾರಿಗಲ್ ಅವರ ‘ತಳದ ಜನರ ತಳಮಳ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
‘ಎಪ್ಪತ್ತು, ಎಂಬತ್ತರ ದಶಕದಲ್ಲಿ ನಡೆದ ದಲಿತ ಚಳವಳಿಯ ಸಂಘರ್ಷದಲ್ಲಿ ಬಾಬು ಭಂಡಾರಿಗಲ್ ಇದ್ದವರು. ಆ ಚಳವಳಿಯ ಹಿನ್ನೆಲೆಯಲ್ಲಿ ಇವರ ಕಾವ್ಯ ಕೂಡ ತೀವ್ರವಾಗಿ ಆಕ್ರೋಶದಿಂದ ಬಂದಿದೆ. ಈ ಕೃತಿಯಲ್ಲಿ 28 ಕವಿತೆಗಳಿದ್ದು, ಈ ಕವಿತೆಗಳು ಸಮಾಜದ ಪ್ರತಿಬಿಂಬವಾಗಿದೆ. ಅನ್ಯಾಯ, ಶೋಷಣೆ, ದೌರ್ಜನ್ಯ, ಅಸಮಾನತೆಯ ವಿರುದ್ಧ ಈ ಕವಿತೆಗಳು ಮಾತನಾಡುತ್ತವೆ. ತಳ ಸಮುದಾಯದ ಬದುಕಿನ ಬವಣೆಗಳು ಈ ಕವಿತೆಗಳಲ್ಲಿ ಪ್ರತಿಧ್ವನಿಸುತ್ತವೆ’ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಶರೀಫ್ ಹಸಮಕಲ್ ಮಾತನಾಡಿ, ‘ಬಾಬು ಭಂಡಾರಿಗಲ್ ತಮ್ಮ ಕಾವ್ಯವನ್ನು ಹರಿತಗೊಳಿಸಿ ಪ್ರತಿರೋಧದ ನೆಲೆಯಲ್ಲಿ ನಿರ್ಭಿಡೆಯಿಂದ ಕಟ್ಟಿದ್ದಾರೆ. ಅಸಮಾನತೆಯ ವಿರುದ್ಧ ಆಕ್ರೋಶ, ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಧ್ವನಿ ಇವರ ಕಾವ್ಯದಲ್ಲಿ ಅಡಗಿದೆ’ ಎಂದರು.
ಚಿಂತಕ ಅಂಬರೀಶ ಬಲ್ಲಿದವ ಮಾತನಾಡಿ, ‘ದಲಿತ, ಬಂಡಾಯ ಧೋರಣೆ ಇರುವ ಈ ಕಾವ್ಯ ಎಪ್ಪತ್ತು–ಎಂಬತ್ತರ ದಶಕದ ಕಾಲಘಟ್ಟದ್ದಾಗಿದೆ’ ಎಂದು ಹೇಳಿದರು.
‘ದಲಿತರ ಆಗಿನ ಸ್ಥಿತಿಗೂ, ಈಗಿನ ಸಾಮಾಜಿಕ–ಆರ್ಥಿಕ ಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಆದರೆ ಮೇಲ್ಜಾತಿಗಳ ಮನಸ್ಥಿತಿಯಲ್ಲಿ ಬದಲಾವಣೆ ಕಂಡರೂ ಮಾನಸಿಕವಾಗಿ ಜಾತಿಯ ಮೂಲಗಳನ್ನು ಉಳಿಸಿಕೊಂಡಿವೆ. ದಲಿತರಲ್ಲಿಯೂ ಮಾನಸಿಕ ಬದಲಾವಣೆ, ಸಮಾನತೆಯ ಧೋರಣೆಗಳು ಇಲ್ಲ. ಶೋಷಣೆ, ಅಸಮಾನತೆ ವಿರುದ್ಧ ಹೋರಾಡಿದವರು ಸಾಮಾಜಿಕ ನ್ಯಾಯದಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ ಅವರಲ್ಲಿ ಕೂಡ ಅಸಮಾನತೆಯ ಬೇರುಗಳು ಸಡಿಲವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಹಿತಿಗಳಾದ ರಾಮಣ್ಣ ಹವಳೆ, ಬಿ.ಜೆ.ಹುಲಿ, ಅಯ್ಯಪ್ಪ ಹುಡಾ, ಆಂಜನೇಯ ಜಾಲಿಬೆಂಚಿ, ವೀರ ಹನುಮಾನ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಕೃತಿಕಾರ ಬಾಬು ಭಂಡಾರಿಗಲ್ ಉಪಸ್ಥಿತರಿದ್ದರು.
ರಾವುತರಾವ್ ಸ್ವಾಗತಿಸಿದರು. ವಿಜಯ ರಾಜೇಂದ್ರ ನಿರೂಪಿಸಿದರು. ರೇಖಾ ಬಡಿಗೇರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.