ADVERTISEMENT

ರಾಯಚೂರು ಕ್ಷೇತ್ರ: ಕಾಂಗ್ರೆಸ್‌ ಊಹೆಗೂ ನಿಲುಕಲಿಲ್ಲ ಮೋದಿ ಅಲೆ!

ಏಳು ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿಗೆ ಹರಿದು ಬಂದ ಮತಗಳು

ನಾಗರಾಜ ಚಿನಗುಂಡಿ
Published 24 ಮೇ 2019, 19:56 IST
Last Updated 24 ಮೇ 2019, 19:56 IST
ಶರಣಪ್ಪಗೌಡ ಜಾಡಲದಿನ್ನಿ
ಶರಣಪ್ಪಗೌಡ ಜಾಡಲದಿನ್ನಿ   

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆ ಪ್ರಚಾರ ಹಾಗೂ ಮತದಾನವಾದ ಬಳಿಕ ಪ್ರಧಾನಿ ಮೋದಿ ಪರವಾದ ಅಲೆಗಳ ಬಗ್ಗೆ ಜಿಲ್ಲೆಯ ಕಾಂಗ್ರೆಸ್‌ ನಾಯಕರು ಮಾಡಿದ್ದ ಮತಗಳ ಲೆಕ್ಕಾಚಾರಗಳೆಲ್ಲ ಊಹೆಗೂ ಮೀರಿ ನೆಲಕಚ್ಚಿವೆ!

ದೇವದುರ್ಗ, ಮಾನ್ವಿ, ಲಿಂಗಸುಗೂರು, ರಾಯಚೂರು ಗ್ರಾಮೀಣ ಹಾಗೂ ಶಹಾಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಕನಿಷ್ಠ ಪ್ರಮಾಣದಲ್ಲಿಯಾದರೂ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಳ್ಳುತ್ತದೆ ಎನ್ನುವುದು ಗೆಲುವಿನ ಲೆಕ್ಕಾಚಾರಕ್ಕೆ ಬುನಾದಿಯಾಗಿತ್ತು. ಆದರೆ, ಫಲಿತಾಂಶದ ಅಂಕಿ ಅಂಶಗಳನ್ನು ಅವಲೋಕಿಸಿದಾಗ, ಮೋದಿ ಪರ ಅಲೆಗಳು ಕಾಂಗ್ರೆಸ್‌ ಗೆಲುವಿನ ಬೂನಾದಿಯನ್ನು ಕೊಚ್ಚಿ ಹಾಕಿದೆ. ದೇವದುರ್ಗದಲ್ಲಿ ಮಾತ್ರ ಕಾಂಗ್ರೆಸ್‌ ಮುನ್ನಡೆ ದಾಖಲಿಸಿದೆ.

ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರವಾಗಿ ಮೋದಿ ಅಲೆ ಬೀಸಿದ್ದರೂ ದೇವದುರ್ಗದಲ್ಲಿ ಮಾತ್ರ ಈ ಸಲ ಕಾಂಗ್ರೆಸ್‌ ಪರ ನಿರೀಕ್ಷೆ ಮೀರಿ ಮತದಾರರು ಒಲವು ತೋರಿಸಿದ್ದಾರೆ. ಹಾಲಿ ಶಾಸಕ ಶಿವನಗೌಡ ನಾಯಕ ಅವರು ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಅಲ್ಲದೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಹಳಷ್ಟು ಮತಗಳನ್ನು ಬಿಜೆಪಿಯತ್ತ ಸೆಳೆದಿದ್ದರು. ಈ ಬಾರಿ ಚುನಾವಣೆಯಲ್ಲಿ ದೇವದುರ್ಗ ಮತದಾರರು ತಮ್ಮ ತಾಲ್ಲೂಕಿನ ಅಭ್ಯರ್ಥಿ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ವಿ. ನಾಯಕ ಅವರನ್ನು ಹೆಚ್ಚು ಬೆಂಬಲಿಸಿದ್ದಾರೆ.

ADVERTISEMENT

ನಿರೀಕ್ಷಿಸಿದಂತೆ ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅರಮೇಶ್ವರ ನಾಯಕ ಅವರಿಗೆ 88,863 ಮತಗಳು ಬಂದಿವೆ. ಎಂಟು ವಿಧಾನಸಭೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಬಿಜೆಪಿಗೆ ಅತಿಹೆಚ್ಚು 25,360 ಗೆಲುವಿನ ಅಂತರ ನೀಡಿರುವ ಕ್ಷೇತ್ರ ಸುರಪುರ. ಆನಂತರ ನಿರೀಕ್ಷೆಗಿಂತಲೂ ನಿರೀಕ್ಷೆ ಮೀರಿ ಬಿಜೆಪಿಗೆ ಹೆಚ್ಚು ಮತದಾರರ ಬೆಂಬಲ ಸಿಕ್ಕಿರುವುದು ಮಾನ್ವಿ ಹಾಗೂ ಲಿಂಗಸುಗೂರು ವಿಧಾನಸಭೆ ಕ್ಷೇತ್ರಗಳಲ್ಲಿ. ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ತಾಲ್ಲೂಕಿನ ಪ್ರಭಾವಿ ಕಾಂಗ್ರೆಸ್‌ ನಾಯಕ ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜು ಅವರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಅವರಿಗೆ ಮುನ್ನಡೆ ಸಿಗುತ್ತದೆ ಎನ್ನುವುದು ಪ್ರತಿಯೊಬ್ಬರ ಲೆಕ್ಕಾಚಾರವಾಗಿತ್ತು. ಆದರೆ, ಅದೇ ಕ್ಷೇತ್ರದಲ್ಲಿ 21,531 ಮತಗಳ ಅಂತರ ಬಿಜೆಪಿಗೆ ಸಿಕ್ಕಿದೆ.

ಲಿಂಗಸುಗೂರು ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್‌ ಶಾಸಕರಿದ್ದರೂ ಬಿಜೆಪಿ ಅಭ್ಯರ್ಥಿಯು ಅದೇ ತಾಲ್ಲೂಕಿನವರು, ಹೀಗಾಗಿ ಸಮಬಲದ ಮತಗಳು ಬರಬಹುದು ಎನ್ನುವ ಅಂದಾಜು ಮಾಡಲಾಗಿತ್ತು. ಆದರೆ, ಎರಡನೇ ಅತಿಹೆಚ್ಚು 21,697 ಮತಗಳ ಅಂತರವು ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದೆ. 20 ವರ್ಷಗಳ ಹಿಂದೆ ಲಿಂಗಸುಗೂರು ಕ್ಷೇತ್ರದಲ್ಲಿ ಶಾಸಕರಾಗಿ ಮತ್ತು ಸಚಿವರಾಗಿದ್ದ ರಾಜಾ ಅಮರೇಶ್ವರ ನಾಯಕ ಅವರು ಪ್ರಭಾವ ಉಳಿಸಿಕೊಂಡಿರುವುದಕ್ಕೆ ಇದು ದ್ಯೋತಕ. ಅಲ್ಲದೆ, ಮೋದಿ ಅಲೆಯು ಗೆಲುವಿನ ಅಂತರವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.