ADVERTISEMENT

‘ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ’ 

ಆಶಾ ಕಾರ್ಯಕರ್ತೆಯರ ಪ್ರಥಮ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 14:34 IST
Last Updated 31 ಜುಲೈ 2024, 14:34 IST

ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಅಥವಾ ಕಾರ್ಮಿಕರೆಂದು ಪರಿಗಣಿಸಬೇಕು ಎಂದು ಆಶಾ ಕಾರ್ಯಕರ್ತರ ಸಂಘದ ರಾಜ್ಯ ಮುಖಂಡರಾದ ಸಂಧ್ಯಾ ಒತ್ತಾಯಿಸಿದರು.

ನಗರದ ಕನ್ನಡ ಭವನದಲ್ಲಿ ಬುಧವಾರ ಕರ್ನಾಟಕ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ ಸಂಯೋಜಿತ) ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಂಯೋಜಿತಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ 2009ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಆಗ ಅವರನ್ನು ದಿನದಲ್ಲಿ ಎರಡು ತಾಸು ಮಾತ್ರ ಕೆಲಸ ನೀಡಲಾಗಿತ್ತು. ಆಗ ಸ್ವಯಂ ಸೇವಕರಾಗಿ ನೇಮಕ ಮಾಡಿಕೊಳ್ಳಲಾಯಿತು. ಇಂತಹ ಕೆಲಸಕ್ಕೆ ಇಂತಿಷ್ಟು ಗೌರವ ಧನ ನೀಡಲಾಗುತ್ತಿತ್ತು. ಅವರಿಗೆ ಯಾವುದೇ ಮಾನ್ಯತೆ ಇರಲಿಲ್ಲ. ಆಗಿನಿಂದ ಎಐಯುಟಿಯುಸಿ ನೇತೃತ್ವದಲ್ಲಿ ಸಂಘಟನೆ ಮಾಡಿ, ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಹಲವು ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.‌

ಮ್ಯಾಚಿಂಗ್ ಗ್ರಾಂಟ್ಸ್, ನಿಗದಿತ ವೇತನ, ಯೂಯುನಿಫಾರ್ಮ್ ಇನ್ನಿತರ ಹಲವು ಸೌಲಭ್ಯ ಪಡೆಯುತ್ತಿದ್ದಾರೆ. ಈಗ ಅವರು ₹10 ರಿಂದ ₹ 12 ಸಾವಿರ ಗೌರವಧನ ಸಿಗುತ್ತಿದೆ. ಆದರೆ ಸರ್ಕಾರ ಆಶಾಗಳಿಂದ ಪ್ರತಿಯೊಂದು ಕೆಲಸ ಮಾಡಿಸಲು ಮುಂದಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಆಶಾ ಕಾರ್ಯಕರ್ತೆಯರು ದಿನದ ಇಪ್ಪತ್ತು ನಾಲ್ಕು ಗಂಟೆ ಕೆಲಸ ಮಾಡುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಅಥವಾ ಕಾರ್ಮಿಕರೆಂದು ಪರಿಗಣಿಸಬೇಕೆಂದು ಆಗ್ರಹಿಸಿದರು. ಕಾರ್ಮಿಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಆಶಾಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಎನ್.ಎಸ್. ಮಾತನಾಡಿ, ಆಶಾ ಕಾರ್ಯಕರ್ತೆಯರ ಸಂಘವನ್ನು ಬಲಪಡಿಸಬೇಕು. ಅವರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಬಲಿಷ್ಠ ಹೋರಾಟವನ್ನು ಕಟ್ಟುವ ದಿಕ್ಕಿನಲ್ಲಿ ಆಶಾ ಕಾರ್ಯಕರ್ತೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚಿಸಿ ಮುಂದಿನ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಈರಮ್ಮ ಮಾತನಾಡಿ, ಕಳೆದ 15 ವರ್ಷಗಳಿಂದ ನಮ್ಮ ಸಂಘವು ಹಂತ ಹಂತವಾಗಿ ಹೋರಾಟ ನಡೆಸಿದ ಫಲವಾಗಿ ಆಶಾಗಳಿಗೆ ಸಮಾಜದಲ್ಲಿ ಗೌರವ ಲಭಿಸಿದೆ. ಅದನ್ನು ಉಳಿಸಿ ಬೆಳೆಸಿ ಸಂಘವನ್ನು ಬಲಿಷ್ಠಗೊಳಿಸಬೇಕು ಎಂದು ಸಲಹೆ ನೀಡಿದರು.

ಎಐಯುಟಿಯುಸಿ ಉಪಾಧ್ಯಕ್ಷ ಮಹೇಶ ಚೀಕಲಪರ್ವಿ, ಅಪ್ಪಣ್ಣ,ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳಾದ ರಾಧಾ, ಈರಮ್ಮ ಜಾಲಹಳ್ಳಿ, ಪ್ರಭಾವತಿ, ಶಕುಂತಲಾ, ದೇವಮ್ಮ, ಶ್ರೀದೇವಿ, ಲಕ್ಷ್ಮಿ,ಶೋಭಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.