ADVERTISEMENT

ರಾಯಚೂರು: ಸಂವಿಧಾನ ಜಾಗೃತಿ ಬೃಹತ್ ಜಾಥಾ

‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನ: 30 ಸಂಘಟನೆಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:20 IST
Last Updated 19 ನವೆಂಬರ್ 2025, 6:20 IST
ರಾಯಚೂರಿನಲ್ಲಿ ಮಂಗಳವಾರ ಸಂವಿಧಾನ ರಕ್ಷಣಾ ಪಡೆ ವೇದಿಕೆ ವತಿಯಿಂದ ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನದಡಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು
ರಾಯಚೂರಿನಲ್ಲಿ ಮಂಗಳವಾರ ಸಂವಿಧಾನ ರಕ್ಷಣಾ ಪಡೆ ವೇದಿಕೆ ವತಿಯಿಂದ ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನದಡಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು   

ರಾಯಚೂರು: ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಸಂವಿಧಾನ ರಕ್ಷಣಾ ಪಡೆ ವೇದಿಕೆ ವತಿಯಿಂದ ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನದಡಿ ನಗರದಲ್ಲಿ ಮಂಗಳವಾರ ಸಂವಿಧಾನ ಜಾಗೃತಿ ಜಾಥಾ ನಡೆಯಿತು.

ಬುದ್ಧ ವಿಹಾರದ ಭಂತೇಜಿ ಹಾಗೂ ಗೋನವಾರದ ಬಸವರಾಜ ಸ್ವಾಮೀಜಿ ಜಾಥಾಕ್ಕೆ ಚಾಲನೆ ನೀಡಿದರು.

ಕರ್ನಾಟಕ ಸಂಘದ ಆವರಣದಿಂದ ಆರಂಭವಾದ ಜಾಥಾ ನೇತಾಜಿ ವೃತ್ತ, ಸರಾಫ್ ಬಜಾರ್, ತೀನ್ ಕಂದೀಲ್, ಭಗತ್ ಸಿಂಗ್ ವೃತ್ತ, ಏಕ್ ಮಿನಾರ್, ಜೈಲ್ ರಸ್ತೆ, ತಹಶೀಲ್ದಾರ್ ಕಚೇರಿ ರಸ್ತೆ, ಕೇಂದ್ರ ಬಸ್ ನಿಲ್ದಾಣದ ಮುಂಭಾಗದಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತಕ್ಕೆ ಬಂದು ಸಮಾವೇಶಗೊಂಡಿತು.

ADVERTISEMENT

ಜಾಥಾದ ಮುಂಚೂಣಿಯಲ್ಲಿ ರಾಷ್ಟ್ರ ಧ್ವಜ ರಾರಾಜಿಸಿದರೆ, ಉಳಿದವರ ಕೈಯಲ್ಲಿ ನೀಲಿ ಧ್ವಜ ಕಂಡು ಬಂದಿತು. ಪುರಷರು ನೀಲಿ ಪ್ಯಾಂಟ್‌, ಬಿಳಿ ಶರ್ಟ್‌ ಹಾಗೂ ಮಹಿಳೆಯರು ನೀಲಿ ಧಡಿಯ ಬಿಳಿ ಸೀರೆ ತೊಟ್ಟು ಗಮನ ಸೆಳೆದರು. ಸಂವಿಧಾನ ಜಾಗೃತಿ ಜಾಥಾದಲ್ಲಿ 30 ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ. ವಿರೂಪಾಕ್ಷಿ, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ದಲಿತ ಮುಖಂಡ ರವೀಂದ್ರನಾಥ ಪಟ್ಟಿ, ಮಹಮ್ಮದ್ ಶಾಲಂ, ಅಸ್ಲಂ ಪಾಷಾ, ರಜಾಕ್ ಉಸ್ತಾದ್, ಎಂ.ಆರ್.ಬೇರಿ, ಕೆ.ಇ.ಕುಮಾರ, ಸತ್ಯನಾಥ ವಿಶ್ವನಾಥ ಪಟ್ಟಿ, ಯುಸೂಫ್ ಖಾನ್, ರಾಜು, ತಮ್ಮಣ್ಣ ವಕೀಲ, ವಿಜಯ ರಾಣಿ, ಜಾನ್ ವೆಸ್ಲಿ, ದಾನಪ್ಪ ನೀಲಗಲ್, ಸೈಯದ್ ಮಾಸೂಮ್ ಭಾಗವಹಿಸಿದ್ದರು.

ಮನುವಾದಿಗಳಿಂದ ಸಂವಿಧಾನಕ್ಕೆ ಏಟು: ‘ಅಸಮಾನತೆಯ ಪ್ರತಿಪಾದಕರು ಹಾಗೂ ಸಮಾನತೆಯನ್ನು ಒಪ್ಪದಿರುವವರು ಸಂವಿಧಾನದ ಅಂಗಗಳಿಗೆ ಒಳ ಏಟುಗಳನ್ನು ಕೊಡುತ್ತಿದ್ದಾರೆ. ದೇಶದ ಸಂವಿಧಾನ ಸುರಕ್ಷಿತವಾಗಿದೆ ಎನ್ನುವುದು ಶುದ್ಧ ಸುಳ್ಳು’ ಎಂದು ಗೋನವಾರ ಹುಚ್ಚುಬುಡೇಶ್ವರ ಮಠದ ಬಸವರಾಜ ಸ್ವಾಮಿ ಹೇಳಿದರು.

ಸಂವಿಧಾನ ಸಂರಕ್ಷಣೆ ಜಾಗೃತಿ ಜಾಥಾದ ನಂತರ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಸಮಾವೇಶಗೊಂಡವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಆತ್ಮ, ದೇಹದ ರಕ್ಷಣೆ ಮಾಡಿದಂತೆ ಸಂವಿಧಾನ ರಕ್ಷಣೆಯ ಪಣತೊಡಬೇಕು’ ಎಂದರು.

‘ಸಮಾಜದಲ್ಲಿ ಬಲವಾಗಿ ಬೇರೂರಿರುವ ಮೂಢನಂಬಿಕೆ ತೊಲಗಬೇಕು. ಪಂಚಾಂಗ ಭವಿಷ್ಯ ಕೇವಲ ಸೂರ್ಯ, ಚಂದ್ರ ಇತರೆ ಗ್ರಹ ಮತ್ತು ಬೆಳಕಿಗೆ ಮಾತ್ರ ಸಂಬಂಧಿಸಿದೆ. ಪಂಚಾಂಗ ಭವಿಷ್ಯದ ಮೇಲಿನ ನಂಬಿಕೆ ಬಿಟ್ಟು ವೈಚಾರಿಕತೆ ಚಿಂತನೆಯಲ್ಲಿ ತೊಡಗಬೇಕು’ ಎಂದು ತಿಳಿಸಿದರು.

ದಲಿತ ಮುಖಂಡ ಸತ್ಯನಾಥ ಮಾತನಾಡಿ, ‘ದಲಿತರು, ಹಿಂದುಳಿದವರು ಎಲ್ಲಿಯವರೆಗೂ ಜೀವಂತವಾಗಿರುತ್ತಾರೋ ಅಲ್ಲಿಯವರೆಗೂ ಸಂವಿಧಾನ ರಕ್ಷಣೆ ಮಾಡಲಿದ್ದಾರೆ. ಸಂವಿಧಾನ ಬದಲಿಸಲು ಹೊರಟ ಮನುವಾದಿಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ದಲಿತ ಮುಖಂಡ ಎಂ.ಆರ್‌.ಬೇರಿ ಮಾತನಾಡಿ, ‘ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್‌ ರಚಿತ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಮನುವಾದಿಗಳು ಸಂವಿಧಾನ ವಿರೋಧಿಸಿಕೊಂಡು ಬಂದಿದ್ದಾರೆ. ಮನುವಾದಿಗಳು ಒಂದೇ ಪಕ್ಷದಲ್ಲಿ ಇಲ್ಲ. ಅವರ ಸಂತತಿ ಬಿಜೆಪಿ, ಕಾಂಗ್ರೆಸ್‌ ಪಕ್ಷದಲ್ಲೂ ಇದೆ. ದಲಿತ ಹಾಗೂ ಹಿಂದುಳಿದ ಜನ ಸಮುದಾಯದವರು ಜಾಗೃತರಾಗಬೇಕಿದೆ’ ಎಂದು ತಿಳಿಸಿದರು.

‘ಕೆಲ ಸಂಘಟನೆಗಳು ದೇಶ ಭಕ್ತಿ ಹೆಸರಿನಲ್ಲಿ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿವೆ. ಸಮಾನತೆಯ ತತ್ವವನ್ನೇ ವ್ಯವಸ್ಥಿತವಾಗಿ ವಿರೋಧಿಸಿ ಕೊಂಡು ಬಂದಿರುವ ಸಂಘಟನೆ ಹಾಗೂ ಮುಖಂಡರಿಂದ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

‘ದೇಶದ ತಳ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಬೇಕು ಎನ್ನುವ ಮನಸ್ಥಿತಿ ಮನುವಾದಿಗಳಲ್ಲಿ ಇಲ್ಲ. ಹೀಗಾಗಿ ಲಾಠಿ ಬಿಟ್ಟು ಮಕ್ಕಳ ಕೈಗೆ ಪೆನ್ನು, ಪುಸ್ತಕ ಕೊಡಬೇಕು. ದೇಶದ ಸಮಗ್ರತೆ ಹಾಗೂ ಏಕತೆ ಕಾಪಾಡುವಂತೆ ಮನವಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಬೆಂಗಳೂರಿನ ಬುದ್ಧ ವಿಹಾರದ ಪೂಜ್ಯ ಭಂತೆ ನಾಗರತ್ನ, ಎಂ.ವಸಂತ, ಕೆ.ಇ.ಕುಮಾರ, ತಮ್ಮಣ್ಣ ವಕೀಲ, ವಿಜಯರಾಣಿ, ದಾನಪ್ಪ ನೀಲೊಗಲ್, ವೈ.ನರಸಪ್ಪ, ಅರ್ಚನಾ ಸುಂಕಾರಿ ಹಾಗೂ ಅಬ್ರಹಾಂ ಹೊನ್ನಟಗಿ ಉಪಸ್ಥಿತರಿದ್ದರು.

ಮುದಗಲ್‌ನ ಪದ್ಮಾ ಕೋಟ ಕಲಾವಿದರ ತಂಡ ರಮಾಬಾಯಿ ಅಂಬೇಡ್ಕರ್‌ ನಾಟಕ ಪ್ರದರ್ಶಿಸಿತು. 

ಸಂವಿಧಾನ ಜಾಗೃತಿ ಜಾಥಾದಲ್ಲಿ ತೆರೆದ ವಾಹನದಲ್ಲಿ ಸಂವಿಧಾನದ ಪೀಠಿಕೆ ಪ್ರತಿಕೃತಿ ಇಟ್ಟು ರಾಷ್ಟ್ರಧ್ವಜ ಕಟ್ಟಿ ಮೆರವಣಿಗೆ ಮಾಡಲಾಯಿತು

ನೀಲಿ ಧ್ವಜಗಳಿಂದ ಡಾ.ಅಂಬೇಡ್ಕರ್ ವೃತ್ತಕ್ಕೆ ಅಲಂಕಾರ ಮೆರವಣಿಗೆ ಮಾರ್ಗದುದ್ದಕ್ಕೂ ಬಂಟಿಂಗ್ಸ್‌ ಅಳವಡಿಕೆ 18 ಸಂಘಟನೆಗಳ ಕಾರ್ಯಕರ್ತರು ಜಾಥಾದಲ್ಲಿ ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.