ADVERTISEMENT

ರಾಜಕೀಯ ಪಕ್ಷಗಳಿಂದ ಒಳಮೀಸಲಾತಿ ನೆನಗುದಿಗೆ: ಶ್ರೀಧರ್‌ ಕಲವೀರ್‌ ಹೇಳಿಕೆ

ಸಂವಿಧಾನ ಸಮರ್ಪಣಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 14:17 IST
Last Updated 26 ನವೆಂಬರ್ 2021, 14:17 IST
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಷ್ಟ್ರೀಯ ಮಾದಿಗ ಜಾಗೃತ ಸೇನೆಯಿಂದ ಶುಕ್ರವಾರ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲವೀರ್ ಉದ್ಘಾಟಿಸಿ ಮಾತನಾಡಿದರು 
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಷ್ಟ್ರೀಯ ಮಾದಿಗ ಜಾಗೃತ ಸೇನೆಯಿಂದ ಶುಕ್ರವಾರ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮವನ್ನು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲವೀರ್ ಉದ್ಘಾಟಿಸಿ ಮಾತನಾಡಿದರು    

ರಾಯಚೂರು: ಸಂವಿಧಾನದ ಆಶಯದಂತೆ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಮಾದಿಗ ಸಮುದಾಯಕ್ಕೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಸಮಾಜದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಆದ್ಯತೆ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಮುಂದಾಗಬೇಕು ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲವೀರ್ ಹೇಳಿದರು.

ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಾಷ್ಟ್ರೀಯ ಮಾದಿಗ ಜಾಗೃತ ಸೇನೆಯಿಂದ ಶುಕ್ರವಾರ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ದೊರೆಯಬೇಕು ಎಂಬ ಉದ್ದೇಶದಿಂದ ದುಂಡು ಮೇಜಿನ ಸಭೆಯಲ್ಲಿ ಒತ್ತಾಯ ಮಾಡಿದ್ದರು. ಸಂವಿಧಾನದ ಮೂಲಕ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ ಮೀಸಲಾತಿಯನ್ನು ಶೇ 50 ರಷ್ಟು ಹೆಚ್ಚಳ ಮಾಡಬಾರದು ಎಂದು ಹಲವರು ಅಡ್ಡಗಾಲು ಹಾಕುತ್ತಿದ್ದಾರೆ. ಸಂವಿಧಾನದಲ್ಲಿ ತಿದ್ದುಪಡಿ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಲು ಅವಕಾಶವಿದ್ದು ತುಳಿತಕ್ಕೆ ಒಳಗಾದ ಸಮುದಾಯದ ಅಭಿವೃದ್ಧಿ ಆಗುವವರೆಗೆ ಹೆಚ್ಚಿನ ಮೀಸಲಾತಿ ಸೌಲಭ್ಯ ದೊರೆಯಬೇಕು ಎಂದು ತಿಳಿಸಿದರು.

ADVERTISEMENT

ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ಹಿಂದುಳಿದ ತುಳಿತಕ್ಕೆ ಒಳಗಾದ ಮಾದಿಗ ಸಮಾಜಕ್ಕೆ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ನೀಡಬೇಕು ಎಂಬ ಆಶಯದಿಂದ ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳಿಂದ ಅನೇಕ ವರ್ಷಗಳಿಂದ ಹೋರಾಟ ಮಾಡಲಾಗಿದೆ. ಇದರ ಫಲವಾಗಿ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನ್ಯಾ.ಎ.ಜೆ.ಸದಾಶಿವ ಅವರ ಮೂಲಕ ವರದಿ ರಚನೆ ಮಾಡಲಾಗಿದೆ. ಅನೇಕ ಸರ್ಕಾರ ಬದಲಾದರೂ ರಾಜಕೀಯ ಹಗ್ಗಜಗ್ಗಾಟದಿಂದ ಇವರೆಗೂ ವರದಿ ಜಾರಿಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಮಾದಿಗ ಮೀಸಲಾತಿ ಜಾಗೃತಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಬೋರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿದರು.

ನ್ಯಾ.ಎ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿಯ ರಾಜ್ಯ ಮುಖಂಡ ಅಂಬಣ್ಣ ಅರೋಲಿಕರ್ ಕ್ರಾಂತಿಗೀತೆ ಹಾಡಿದರು.

ಚಿತ್ರದುರ್ಗದ ಆದಿಜಾಂಬವ ಮಠದ ಷಡಕ್ಷರಿಮುನಿ ಸ್ವಾಮಿ, ದೇವದುರ್ಗದ ಅರಗಿನ ಮಠದ ಬಸವದೇವರು ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಾಹಿತಿ ದಾನಪ್ಪ ನಿಲೋಗಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಹನುಮಂತರಾಯ ಕಪಗಲ್, ಆದಿಜಾಂಬವ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ರಾಮಣ್ಣ, ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಮಧುಚಕ್ರವರ್ತಿ, ಬಸವರಾಜ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.