ADVERTISEMENT

ರಾಯಚೂರು ನಗರ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿಯಲ್ಲೂ ಓರೆಕೋರೆಗಳು!

ಅಡ್ಡಲಾದ ಕಟ್ಟಡಗಳ ತೆರವಿಗೆ ನಿಯಮಾನುಸಾರ ಕ್ರಮ ಕೈಗೊಳ್ಳದ ಜಿಲ್ಲಾಡಳಿತ

ನಾಗರಾಜ ಚಿನಗುಂಡಿ
Published 17 ಸೆಪ್ಟೆಂಬರ್ 2019, 19:30 IST
Last Updated 17 ಸೆಪ್ಟೆಂಬರ್ 2019, 19:30 IST
ರಾಯಚೂರು ನಗರದ ಎಸ್‌ಎಲ್‌ವಿ ತಂಗುದಾಣದ ದುಃಸ್ಥಿತಿ
ರಾಯಚೂರು ನಗರದ ಎಸ್‌ಎಲ್‌ವಿ ತಂಗುದಾಣದ ದುಃಸ್ಥಿತಿ   

ರಾಯಚೂರು: ನಗರ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167) ಅಭಿವೃದ್ಧಿ ಕಾಮಗಾರಿ ಆರಂಭವಾಗಿ ಎರಡುವರೆ ವರ್ಷಗಳಾದರೂ ಬಾಕಿ ಉಳಿದ ಓರೆಕೋರೆ ಸರಿಪಡಿಸಲು ಸಾಧ್ಯವಾಗುತ್ತಿಲ್ಲ!

ಏಳು ಕಡೆಗಳಲ್ಲಿ ಒಟ್ಟು 10 ಕಟ್ಡಡಗಳನ್ನು ತೆರವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರುಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಇದುವರೆಗೂ ತೆರವು ಕಾರ್ಯಾಚರಣೆ ಸಂಪೂರ್ಣಗೊಂಡಿಲ್ಲ. ಕಟ್ಟಡ ತೆರವುಗೊಳಿಸಲು ಯಾವುದು ಕಠಿಣ ಎಂದು ಭಾವಿಸಲಾಗಿತ್ತು; ಅದು ಮಾತುಕತೆ ಮೂಲಕ ಪರಿಹಾರ ಕಂಡಿದೆ. ಆದರೆ, ಸರಳವಾಗಿ ತೆರವು ಮಾಡಬಹುದು ಎಂದು ನಿರೀಕ್ಷಿಸಿದ್ದು, ಕಠಿಣವಾಗಿ ಪರಿಣಮಿಸಿದೆ.

20 ಮೀಟರ್‌ ರಸ್ತೆ ಉದ್ದಕ್ಕೂ ವ್ಯಾಪಿಸಿದ್ದ ರಾಮಮಂದಿರ ಕಟ್ಟಡ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಪಕ್ಕದಲ್ಲಿ 20 ಮೀಟರ್‌ ರಸ್ತೆ ಉದ್ದ ವ್ಯಾಪಿಸಿದ್ದ ದರ್ಗಾ ಹಾಗೂ ಎಸ್‌ಎಲ್‌ವಿ ಬಸ್‌ ನಿಲ್ದಾಣ ಪಕ್ಕದಲ್ಲಿ 25 ಮೀಟರ್‌ ರಸ್ತೆ ಉದ್ದಕ್ಕೂ ವ್ಯಾಪಿಸಿದ್ದ ಮನೆಯೊಂದರ ಕಂಪೌಂಡ್‌ಗಳನ್ನು 2018 ರ ಫೆಬ್ರುವರಿಯಲ್ಲಿ ತೆರವುಗೊಳಿಸಲಾಗಿದೆ. ಇನ್ನೂ ಮೂರು ಕಡೆಗಳಲ್ಲಿ ಏಳು ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಬಾಕಿ ಉಳಿದಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ADVERTISEMENT

ಕೆಲವು ಕಟ್ಟಡಗಳ ಮಾಲೀಕರು ಕೋರ್ಟ್‌ ಮೊರೆ ಹೋಗಿರುವುದು ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಥವಾ ಅಗಲೀಕರಣ ಮಾಡುವುದಕ್ಕೆ ಕಾನೂನು ಕ್ರಮ ಜರುಗಿಸಲು ಅವಕಾಶ ಇದ್ದರೂ ಜಿಲ್ಲಾಡಳಿತಾಧಿಕಾರಿಗಳು ಮತ್ತು ನಗರಸಭೆ ಸಮರ್ಪಕವಾಗಿ ಕಾರ್ಯಾಚರಣೆ ನಡೆಸುತ್ತಿಲ್ಲ ಎನ್ನುವ ಟೀಕೆಯೂ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಅಲ್ಲಲ್ಲಿ ಓರೆಕೋರೆಗಳಿಂದ ಕೂಡಿರುವುದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅಲ್ಲದೆ ಜನರಿಗೆ ಸಮರ್ಪಕ ಪಾದಚಾರಿ ಮಾರ್ಗವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ಆಶಾಪುರ ಕ್ರಾಸ್‌ ಸಿದ್ಧರಾಮೇಶ್ವರ ವೃತ್ತದಿಂದ ಆರ್‌ಟಿಓ ಕ್ರಾಸ್‌ವರೆಗೂ ರಾಷ್ಟ್ರೀಯ ಹೆದ್ದಾರಿ ವಿಶಾಲವಾಗಿದ್ದು, ಸಮರ್ಪಕ ಪಾದಚಾರಿ ಮಾರ್ಗಗಳಿವೆ. ಆದರೆ, ಜನಸಂಚಾರ ಹೆಚ್ಚಾಗಿರುವ ಡಾ.ಜಗಜೀವನ್‌ರಾಂ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ಹೆದ್ದಾರಿಯು ಸಮರ್ಪಕವಾಗಿಲ್ಲ. ಒಂದು ಕಡೆ ಚರಂಡಿ ನಿರ್ಮಾಣವಾಗಿಲ್ಲ, ಮತ್ತೊಂದು ಕಡೆ ಪಾದಚಾರಿ ಮಾರ್ಗ ನಿರ್ಮಿಸಿಲ್ಲ. ಕಾನೂನು ಮೂಲಕ ಪರಿಹಾರ ಕಂಡುಕೊಳ್ಳುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗದೆ ಇರುವುದರಿಂದ ಕಟ್ಟಡಗಳ ತೆರವು ಬಾಕಿ ಉಳಿಯುತ್ತಿದೆ. ಕಟ್ಟಡ ತೆರವು ಮಾಡಿ ಕೊಡದೆ ಇರುವುದರಿಂದ ಗುತ್ತಿಗೆದಾರರು ಅರ್ಧಮರ್ಧ ಕಾಮಗಾರಿ ಮಾಡಲಾರಂಭಿಸಿದ್ದಾರೆ.

ರೈಲ್ವೆ ನಿಲ್ದಾಣ ಎದುರಿನ ವೃತ್ತದಲ್ಲಿ ಯೋಜನೆಗೆ ತಕ್ಕಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿಲ್ಲ. ಚರಂಡಿ ಹಾಗೂ ಪಾದಚಾರಿ ಮಾರ್ಗಗಳ ಕಾಮಗಾರಿ ಮಾಡುವುದು ದೂರದ ಮಾತು ಎನ್ನುವಂತಹ ಸ್ಥಿತಿ ಇದೆ. ಯೋಜನೆಯಲ್ಲಿ ಇರುವಂತೆ ಹೆದ್ದಾರಿ ನಿರ್ಮಾಣ ಮಾಡುವುದಕ್ಕೆ ಸಂಘ–ಸಂಸ್ಥೆಗಳು ಹೋರಾಟ ಮಾಡುತ್ತಿವೆ. ಆದರೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕರು ಈ ಬಗ್ಗೆ ಕ್ರಮ ಜರುಗಿಸಲು ಮುಂದಾಗುತ್ತಿಲ್ಲ. ಇದರಿಂದ ರೈಲ್ವೆ ನಿಲ್ದಾಣ ಎದುರು ಪ್ರತಿನಿತ್ಯ ವಾಹನದಟ್ಟಣೆ, ಜನದಟ್ಟಣೆ ಏರ್ಪಡುತ್ತಿದೆ.

ಏಳು ಕಟ್ಟಡಗಳ ತೆರವು ಬಾಕಿ ಇದೆ

ಡಾ.ಬಾಬು ಜಗಜೀವನರಾಂ ವೃತ್ತದ ಪಕ್ಕದಲ್ಲಿ 30 ಮೀಟರ್‌ ಹೆದ್ದಾರಿಯುದ್ದಕ್ಕೂ ವ್ಯಾಪಿಸಿರುವ ನಾಲ್ಕು ಕಟ್ಟಡಗಳು, ಉಮಾ ಹೊಟೇಲ್‌ ಎದುರಿನ ಹೆದ್ದಾರಿಯಲ್ಲಿ 100 ಮೀಟರ್‌ ವ್ಯಾಪ್ತಿಯಲ್ಲಿ ಎರಡು ಕಟ್ಟಡಗಳು ಹಾಗೂ ಮೆಟ್ರೊ ಶೋ ರೂಂ ಕಟ್ಟಡ ಸೇರಿ ಒಟ್ಟು ಏಳು ಕಟ್ಟಡಗಳನ್ನು ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಎರಡುವರೆ ವರ್ಷಗಳಾಗಿದೆ.

*ಯೋಜನೆಯಲ್ಲಿ ಇದ್ದಂತೆ ನಗರದೊಳಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿಲ್ಲ. ರಸ್ತೆ ವಿಭಜಕದ ವಿದ್ಯುತ್‌ ಕಂಬಗಳಲ್ಲಿ ಕಳಪೆದೀಪ ಹಾಕಿದ್ದಾರೆ. ರೈಲ್ವೆ ನಿಲ್ದಾಣ ಎದುರು ಜನರು ತೊಂದರೆ ಅನುಭವಿಸುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು.

–ಡಾ.ಶಿವರಾಜ ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.