ADVERTISEMENT

ಕಟ್ಟಡ ನಿರ್ಮಾಣಕ್ಕೆ ದರ ಏರಿಕೆ ಬಿಸಿ

ಸಿಮೆಂಟ್, ಸ್ಟೀಲ್, ನಿರ್ಮಾಣ ಸಾಮಗ್ರಿಗಳ ಬೆಲೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 12:50 IST
Last Updated 4 ಜೂನ್ 2020, 12:50 IST
ಹಟ್ಟಿಚಿನ್ನದಗಣಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ (ಸಂಗ್ರಹ ಚಿತ್ರ)
ಹಟ್ಟಿಚಿನ್ನದಗಣಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ (ಸಂಗ್ರಹ ಚಿತ್ರ)   

ಹಟ್ಟಿಚಿನ್ನದಗಣಿ: ಪಟ್ಟಣದಲ್ಲಿ ಲಾಕ್‌ಡೌನ್‌ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಟ್ಟಡಗಳ ನಿರ್ಮಾಣ ಕಾರ್ಯ ಪುನರಾರಂಭಿಸುವ ನಿಟ್ಟಿನಲ್ಲಿ ಬೆಲೆ ಏರಿಕೆ ಬಿಸಿ ಕಾಡುತ್ತಿದೆ.

ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಿಮೆಂಟ್, ಸ್ಟೀಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಮರಳು ಕೂಡ ಸರಿಯಾಗಿ ಸಿಗುತ್ತಿಲ್ಲ. ಜೊತೆಗೆ ಕಾರ್ಮಿಕರ ಸಮಸ್ಯೆಯೂ ಕಾಡುತ್ತಿದೆ. ಹೀಗಾಗಿ, ಕಟ್ಟಡ ನಿರ್ಮಾಣ ಆರಂಭಿಸಲು ಮತ್ತೊಮ್ಮೆ ಯೋಚಿಸುವಂತಾಗಿದೆ.

ಮನೆ, ಮತ್ತಿತರ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿ ಗುತ್ತಿಗೆದಾರರು,ಬಿಲ್ಡರ್‌ಗಳು ಈಗಾಗಲೇ ಮಾಲೀಕರಿಂದ ಮುಂಗಡ ಹಣ ಪಡೆದು ಮನೆಗಳ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಬೆಲೆ ಏರಿಕೆ ಆಗಿರುವುದರಿಂದ ಹಿಂದೆ ನಿಗದಿಪಡಿಸಿದ ದರದಲ್ಲಿಯೇ ಮನೆಗಳನ್ನು ನಿರ್ಮಿಸಿಕೊಡುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ADVERTISEMENT

ಲಾಕ್‌ಡೌನ್‌ಗಿಂತ ಮುನ್ನ ಒಂದು ಚೀಲ ಸಿಮೆಂಟ್‌ಗೆ ₹ 310 ದರ ಇತ್ತು. ಈಗ ಅದರ ಬೆಲೆ ₹ 390ರಿಂದ ₹ 400ರಷ್ಟಿದೆ. ಸ್ಟೀಲ್ ದರ ಪ್ರತಿ ಟನ್‌ಗೆ ₹ 39 ಸಾವಿರ ಇತ್ತು. ಈಗ ಅದರ ಬೆಲೆ ₹ 50 ಸಾವಿರಕ್ಕೆ ಹೆಚ್ಚಳವಾಗಿದೆ. ಟೈಲ್ಸ್, ಮತ್ತಿತರ ನಿರ್ಮಾಣ ಸಾಮಗ್ರಿಗಳ ಬೆಲೆಯೂ ಹೆಚ್ಚಳವಾಗಿದೆ.

ಸಿಮೆಂಟ್ ಹಾಗೂ ಸ್ಟೀಲ್ ನಿರ್ಮಾಣ ಕಾರ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತವೆ. ಅವುಗಳ ಬೆಲೆ ಹೆಚ್ಚಾದರೆ ನಿರ್ಮಾಣ ವೆಚ್ಚದಲ್ಲಿ ಶೇ 10ರಿಂದ 15ರಷ್ಟು ಹೆಚ್ಚಾಗುತ್ತದೆ. ಇದರಿಂದ ಹೆಚ್ಚಿನ ಹೊರೆ ಹೊರಲಾಗದ ಬಿಲ್ಡರ್‌ಗಳು ಕೆಲ ಕಾಲ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ನಿವೇಶನ, ಮನೆಗಳಿಗೆ ಬೇಡಿಕೆ ಇಲ್ಲ: ಲಾಕ್‌ಡೌನ್ ಸಡಿಲಿಕೆ ನಂತರ ನಿವೇಶನ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿನ ಮನೆಗಳಿಗೆ ಬೇಡಿಕೆ ಕುಸಿದಿದೆ. ವಿಚಾರಣೆಗೆ ಕೂಡ ಗ್ರಾಹಕರು ಬರುತ್ತಿಲ್ಲ.

ಕೊರೊನಾ ಹಾವಳಿಯಿಂದ ಜನರಲ್ಲಿ ಭವಿಷ್ಯದ ಆರ್ಥಿಕ ಸ್ಧಿತಿಗತಿಯ ಬಗ್ಗೆ ಅನಿಶ್ಚಿತತೆ ಮೂಡಿದೆ. ಹಾಗಾಗಿ, ಜನರು ನಿತ್ಯದ ಬೇಡಿಕೆಗಳತ್ತ ಗಮನ ಹರಿಸುತ್ತಿದ್ದಾರೆಯೇ ಹೊರತು, ಆಸ್ತಿ ಖರೀದಿಗೆ ಹೆಚ್ಚಿನ ಆಸಕ್ತಿ ತೊರುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.