ADVERTISEMENT

ಕವಿತಾಳ: ಆಮೆ ವೇಗದಲ್ಲಿ ಸಾಗಿದ ಕಾಮಗಾರಿ

ಎರಡು ಇಲಾಖೆಗಳಿಂದ ನಾಲ್ಕು ಸೇತುವೆಗಳ ನಿರ್ಮಾಣ

ಮಂಜುನಾಥ ಎನ್ ಬಳ್ಳಾರಿ
Published 20 ಏಪ್ರಿಲ್ 2025, 5:08 IST
Last Updated 20 ಏಪ್ರಿಲ್ 2025, 5:08 IST
ಕವಿತಾಳ ಸಮೀಪದ ನಾಗಲದಿನ್ನಿ ಗ್ರಾಮದ ಹತ್ತಿರ ಶಿಥಿಲಗೊಂಡ ಹಳೆ ಸೇತುವೆ ಪಕ್ಕದಲ್ಲಿ ನಿರ್ಮಿಸುತ್ತಿರುವ ಹೊಸ ಸೇತುವೆ ಅಪೂರ್ಣವಾಗಿರುವುದು
ಕವಿತಾಳ ಸಮೀಪದ ನಾಗಲದಿನ್ನಿ ಗ್ರಾಮದ ಹತ್ತಿರ ಶಿಥಿಲಗೊಂಡ ಹಳೆ ಸೇತುವೆ ಪಕ್ಕದಲ್ಲಿ ನಿರ್ಮಿಸುತ್ತಿರುವ ಹೊಸ ಸೇತುವೆ ಅಪೂರ್ಣವಾಗಿರುವುದು   

ಕವಿತಾಳ: ಜಲ ಸಂಪನ್ಮೂಲ ಮತ್ತು ಲೊಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ನಾಲ್ಕು ಸೇತುವೆಗಳು ಅಪೂರ್ಣವಾಗಿದ್ದು, ಸುಗಮ ಸಂಚಾರಕ್ಕೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಮಳೆಗಾಲದಲ್ಲಿ ವಾಹನ ಸವಾರರಿಗೆ ಸುರಕ್ಷತೆ ಭಯ ಕಾಡುತ್ತದೆ.

ಪಟ್ಟಣದಿಂದ ಮಸ್ಕಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಗೆ ಅಡ್ಡವಾಗಿ ಸಮೀಪದ ಗೂಗೆಬಾಳ, ನಾಗಲದಿನ್ನಿ ಗ್ರಾಮಗಳ ಹತ್ತಿರ ಹಾಗೂ ಇರಕಲ್‌ ಮತ್ತು ಹಾಲಾಪುರದಿಂದ ಸಾನಬಾಳಗೆ ಸಂಪರ್ಕಿಸುವ ರಸ್ತೆಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿವೆ.

ಹಳೆ ಸೇತುವೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ವಾಹನ ಸವಾರರು ಜೀವ ಭಯದಲ್ಲಿ ಓಡಾಡುವಂತಾಗಿದೆ. ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಆರು ತಿಂಗಳು ನಿಗದಿಪಡಿಸಿದ್ದರೂ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಮೂರು ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿವೆ.

ADVERTISEMENT

ಸಂಪೂರ್ಣ ನೀರಾವರಿ ಪ್ರದೇಶವಾದ್ದರಿಂದ ರಸ್ತೆ ಹಾಳಾಗಿದೆ. ಬಹುತೇಕ ಕಡೆ ಆಳವಾದ ಗುಂಡಿಗಳು ಬಿದ್ದಿರುವುದು ಮತ್ತು ಪಟ್ಲರ್‌ ಸಂಚಾರದಿಂದ ಡಾಂಬರು ರಸ್ತೆಯಲ್ಲಿ ಗೀರುಗಳು ಬಿದ್ದು ಸುಗಮ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಿಂದ ಮಸ್ಕಿಗೆ ಸುಮಾರು 22 ಕಿ.ಮೀ ದೂರ ಕ್ರಮಿಸಲು ಒಂದು ಗಂಟೆ ಸಮಯ ಹಿಡಿಯುತ್ತಿದೆ. ಭತ್ತ ಮತ್ತು ಯಂತ್ರಗಳನ್ನು ಸಾಗಿಸುವ ಭಾರಿ ಗಾತ್ರದ ಲಾರಿಗಳ ಓಡಾಟ ಹೆಚ್ಚಿದ್ದು ಹಳೆ ಸೇತುವೆಗಳ ಮೇಲೆ ಅಪಾಯ ಎದುರಿಸುತ್ತಲೇ ಸಂಚರಿಸುವಂತಾಗಿದೆ.

ʼಇಬ್ಬರು ಗುತ್ತಿಗೆದಾರರು ತಲಾ ಎರಡು ಸೇತುವೆಗಳನ್ನು ಗುತ್ತಿಗೆ ಪಡೆದಿದ್ದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನನೆಗುದಿಗೆ ಬಿದ್ದಿವೆ. ಕಾಲುವೆಯಲ್ಲಿ ನೀರು ಪೂರೈಕೆ ಸ್ಥಗಿತವಾದ ನಂತರ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕು’ ಎಂದು ಕಾರ್ಮಿಕ ಸಂಘಟನೆ ಮುಖಂಡ ಎಂ.ಡಿ.ಮೆಹಬೂಬ್‌ ಒತ್ತಾಯಿಸಿದರು.

ʼಗರ್ಡರ್ಸ್‌ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು ಅವುಗಳನ್ನು ಪಿಲ್ಲರ್‌ಗಳಿಗೆ ಅಳವಡಿಸಬೇಕಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕವಿತಾಳ ಸಮೀಪದ ಗೂಗೆಬಾಳ ಗ್ರಾಮದ ಹತ್ತಿರ ನಿರ್ಮಿಸುತ್ತಿರುವ ಹೊಸ ಸೇತುವೆ ಅಪೂರ್ಣವಾಗಿರುವುದು
ಕಾಮಗಾರಿ ವಿಳಂಬವಾದ ಕಾರಣ ಗುತ್ತಿಗೆದಾರರಿಗೆ ಈಗಾಗಲೇ ನೊಟೀಸ್‌ ನೀಡಲಾಗಿದೆ. ಕಾಲುವೆಯಲ್ಲಿ ನೀರು ಸ್ಥಗಿತವಾಗಿದ್ದು ಕಾಮಗಾರಿ ಆರಂಭಿಸಲಾಗುವುದು
ವಿಜಯಲಕ್ಷ್ಮೀ ಪಾಟೀಲ ‍ಪ್ರಭಾರ ಇಇ ಜಲಸಂಪನ್ಮೂಲ ಇಲಾಖೆ ಸಿರವಾರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.