ಲಿಂಗಸುಗೂರು: ‘ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿಯ ಉಪಗುತ್ತಿಗೆ ಕೆಲಸಕ್ಕೆ ಬಿಲ್ ನೀಡದೇ ಸತಾಯಿಸುತ್ತಿರುವ ಎನ್.ಡಿ.ವಡ್ಡರ್ ಕಂಪನಿಯ ನಡೆಗೆ ಬೇಸತ್ತು ಅಕ್ಟೋಬರ್ 15ರಂದು ಶಾಸಕ ವಜ್ಜಲ್ ನಿವಾಸದ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ’ ಎಂದು ದೇವದುರ್ಗ ತಾಲ್ಲೂಕು ಸಣ್ಣ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶರಣೇಗೌಡ ಸುಂಕೇಶ್ವರಹಾಳ ತಿಳಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ದೇವದುರ್ಗ ತಾಲ್ಲೂಕಿನ ನಾರಾಯಣಪುರ ಬಲದಂಡೆ ಕಾಲುವೆಗಳ ಆಧುನೀಕರಣದ ಎರಡನೇ ಪ್ಯಾಕೇಜ್‌ನ ಅಡಿ 17ಡಿ ವಿತರಣಾ ಕಾಲುವೆಯ ಒಟ್ಟು 13.5 ಕಿ.ಮೀ ಕಾಮಗಾರಿ ನಿರ್ವಹಿಸಲು ಎನ್.ಡಿ.ವಡ್ಡರ್ ಕಂಪನಿಯು ಸಣ್ಣ ಸಿವಿಲ್ ಗುತ್ತಿಗೆದಾರರಾದ ತುಕಾರಾಮ ರಾಮಣ್ಣ ಜಿನ್ನಾಪುರ ಅವರಿಗೆ ಉಪಗುತ್ತಿಗೆ ನೀಡಿ 2024 ಏಪ್ರಿಲ್ 24ರಂದು ಒಪ್ಪಂದ ಮಾಡಿಕೊಂಡಿತ್ತು’ ಎಂದು ಹೇಳಿದರು.
‘ಕೆಬಿಜೆಎನ್‌ಎಲ್ ಅಂದಾಜು ವೆಚ್ಚ ಹಾಗೂ ಉಪಗುತ್ತಿಗೆ ಒಪ್ಪಂದದಂತೆ ಉಪಗುತ್ತಿಗೆದಾರ ತುಕಾರಾಮ ಜಿನ್ನಾಪುರ ಅವರೊಂದಿಗೆ ನಾನು, ಪರಮಾನಂದ ಸುಂಕೇಶ್ವರಹಾಳ, ಶಿವು ಸಾಹುಕಾರ, ಅಂಜನೇಯ ಬಡಿಗೇರ್, ವೀರೇಶ ಹೂವಿನಬಾಡು, ಅಮರೇಶ ಸೇರಿಕೊಂಡು ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಕಾಮಗಾರಿ ಪೂರ್ಣಗೊಂಡಿದ್ದರೂ ಕಾಮಗಾರಿಯ ಮೊತ್ತ ₹4.87 ಕೋಟಿ ಬಿಲ್ ಪಾವತಿ ಮಾಡುವಂತೆ ಎನ್.ಡಿ.ವಡ್ಡರ್ ಕಂಪನಿ ಮಾಲೀಕ ಕರಿಯಪ್ಪ ವಜ್ಜಲ್ ಹಾಗು ಶಾಸಕ ಮಾನಪ್ಪ ವಜ್ಜಲ್ ಅವರನ್ನು 10ಕ್ಕೂ ಅಧಿಕ ಬಾರಿ ಭೇಟಿ ಮಾಡಿ ವಿನಂತಿ ಮಾಡಿದರೂ ಬಿಲ್ ನೀಡದೇ ಸುಳ್ಳು ನೆಪಗಳನ್ನು ಹೇಳುತ್ತಿದ್ದಾರೆ. ದೇವದುರ್ಗ ಶಾಸಕಿ ಕರೆಮ್ಮ ಅವರಿಂದ ಶಾಸಕ ವಜ್ಜಲ್ ಅವರಿಗೆ ನಾಲ್ಕು ಬಾರಿ ಹೇಳಿಸಿದರೂ ಬಿಲ್ ಪಾವತಿ ಮಾಡುತ್ತಿಲ್ಲ’ ಎಂದು ಆರೋಪಿಸಿದರು.
‘ಉಪಗುತ್ತಿಗೆಯ ಒಪ್ಪಂದದ ಪ್ರಕಾರ ಸರ್ಕಾರ ಬಿಲ್ ಪಾವತಿ ಮಾಡಿದ ವಾರದಲ್ಲಿ ನಮಗೆ ಬಿಲ್ ನೀಡಬೇಕಾಗಿತ್ತು. ಆದರೆ, ಸರ್ಕಾರದಿಂದ ಎರಡನೇ ಪ್ಯಾಕೇಜ್‌ನಲ್ಲಿ ₹375 ಕೋಟಿ ಬಿಲ್ ಪಡೆದಿದ್ದರೂ ನಮಗೆ ಬಿಲ್ ಮಾಡದೇ ಅವರ ಮನೆ ಹಾಗೂ ಕಚೇರಿಗೆ ಅಲೆದಾಡಿಸುತ್ತಾ ಸತಾಯಿಸುತ್ತಿದ್ದಾರೆ. ತೀರಾ ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ ಅಕ್ಟೋಬರ್ 15ರಂದು ಶಾಸಕ ಮಾನಪ್ಪ ವಜ್ಜಲ್ ಮನೆ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ತುಕಾರಾಮ, ಪರಮಾನಂದ, ಶಿವು ಸಾಹುಕಾರ, ರಂಗಪ್ಪ, ಅಮರೇಶ, ವೀರೇಶ ಹಾಗೂ ಅಂಜನೇಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.