ADVERTISEMENT

ಪರಿಷತ್‌ ಚುನಾವಣೆ: ಐವರು ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 11:23 IST
Last Updated 24 ನವೆಂಬರ್ 2021, 11:23 IST

ರಾಯಚೂರು: ರಾಯಚೂರು ಹಾಗೂ ಕೊಪ್ಪಳ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸುವುದು ಮಂಗಳವಾರ ಕೊನೆಗೊಂಡಿದ್ದು, ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಐವರು ಅಭ್ಯರ್ಥಿಗಳು ಒಟ್ಟು 12 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶರಣಗೌಡ ಪಾಟೀಲ ಬಯ್ಯಾಪೂರ 4 ನಾಮಪತ್ರಗಳು, ಬಿಜೆಪಿ ಅಭ್ಯರ್ಥಿಯಾಗಿ ವಿಶ್ವನಾಥ ಬನಹಟ್ಟಿ 4 ನಾಮಪತ್ರಗಳು, ಜನಹಿತ ಪಾರ್ಟಿ ಅಭ್ಯರ್ಥಿ ತಿರುಪತಿ ನರಸಪ್ಪ ಅವರಿಂದ 2 ನಾಮಪತ್ರಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ದೊಡ್ಡ ಬಸನಗೌಡ ಪಾಟೀಲ ಹಾಗೂ ನರೇಂದ್ರ ಅವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಕೊನೆಯ ದಿನ ಕಾಂಗ್ರೆಸ್‌ ಹಾಗೂ ಬಿಜೆಪಿ, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಿಮಿತ್ತ ಪ್ರತ್ಯೇಕ ಕಡೆಗಳಲ್ಲಿ ಕಾರ್ಯಕರ್ತರ ಸಮಾವೇಶಗಳನ್ನು ಆಯೋಜಿಸಿದ್ದವು. ನಾಮಪತ್ರ ಸಲ್ಲಿಸುವುದಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಾಕಷ್ಟು ಸಂಖ್ಯೆಯಲ್ಲಿ ಮುಖಂಡರು ಬಂದಿದ್ದರು. ಆದರೆ, ಕಚೇರಿಯೊಳಗೆ ಅಭ್ಯರ್ಥಿಯೊಂದಿಗೆ ಮೂವರು ಮಾತ್ರ ಇರುವುದಕ್ಕೆ ಅವಕಾಶ ನೀಡಲಾಗಿತ್ತು.

ADVERTISEMENT

ಬಿಜೆಪಿ ಅಭ್ಯರ್ಥಿಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಂಸದರಾದ ರಾಜಾ ಅಮರೇಶ್ವರ ನಾಯಕ, ಕರಡಿ ಸಂಗಣ್ಣ, ಶಾಸಕರಾದ ಡಾ.ಶಿವರಾಜ್ ಪಾಟೀಲ್, ಬಸವರಾಜ್ ದಡೇಸೂಗೂರು, ಪರಣ್ಣ ಮುನವಳ್ಳಿ, ಶಿವನಗೌಡ ನಾಯಕ ಮತ್ತಿತರರು ಬಂದಿದ್ದರು.

ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಶಾಸಕರಾದ ಬಸನಗೌಡ ದದ್ದಲ್, ಬಸನಗೌಡ ತುರ್ವಿಹಾಳ ಸೇರಿದಂತೆ ಪಕ್ಷದ ಮುಖಂಡರಿದ್ದರು. ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್‌ ಅವರು ನಾಮಪತ್ರಗಳನ್ನು ಸ್ವೀಕರಿಸಿದರು.

ಹೆಚ್ಚವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಚುನಾವಣೆ ಶಾಖೆಯ ಶಿರಸ್ತೇದಾರ ಸೂಗೂರೇಶ ದೇಸಾಯಿ ಇದ್ದರು.

ಇಬ್ಬರೂ ಕೋಟ್ಯಾಧೀಶ ಅಭ್ಯರ್ಥಿಗಳು

ರಾಯಚೂರು: ಕೊಪ್ಪಳ–ರಾಯಚೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಇಬ್ಬರೂ ಕೋಟ್ಯಾಧೀಶರು.

ಶರಣಗೌಡ ಅವರದ್ದು ಚರಾಸ್ತಿ ಒಟ್ಟು ₹17,94,06,249 ಇದೆ. ನಿವೇಶಗಳು, ಜಮೀನು, ಮನೆ ಸೇರಿದಂತೆ ಒಟ್ಟು ₹18,93,05,000 ಮೌಲ್ಯದ ಇದೆ. ₹1.87 ಕೋಟಿ ಸಾಲವಿದೆ ಎಂದು ಘೋಷಿಸಿದ್ದಾರೆ.

ವಿಶ್ವನಾಥ ಬನಹಟ್ಟಿ ಅವರದ್ದು ಒಟ್ಟು ₹1,87,61,554 ಚರಾಸ್ತಿ. ನಿವೇಶಗಳು, ಜಮೀನು, ಮನೆ ಸೇರಿದಂತೆ ಒಟ್ಟು ₹1,56,75,000 ಮೌಲ್ಯದ ಸ್ಥಿರಾಸ್ತಿ ಇದೆ. ₹67.75 ಲಕ್ಷ ಸಾಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.