
ಮಾನ್ವಿ: 2020ರಲ್ಲಿ ಕೋವಿಡ್ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಆ ಸಂದರ್ಭದಲ್ಲಿ ಮಾನ್ವಿ ಪಟ್ಟಣದಲ್ಲಿ ಅನೇಕ ಕೋವಿಡ್ ಪೀಡಿತರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆಗ ಸೈಯದ್ ಅಕ್ಬರ್ ಪಾಷಾ ತಾವು ಅಧ್ಯಕ್ಷರಾಗಿರುವ ರಾಬಿತ–ಏ–ಮಿಲ್ಲತ್ ಸಂಸ್ಥೆಯ ವತಿಯಿಂದ ಕೋವಿಡ್ ಪೀಡಿತರ ಆರೋಗ್ಯ ರಕ್ಷಣೆಗೆ ನೆರವಾಗಿದ್ದನ್ನು ಯಾರೂ ಮರೆಯುವಂತಿಲ್ಲ. ಕೋವಿಡ್ ಪೀಡಿತರಿಗೆ ಉಚಿತವಾಗಿ 300ಕ್ಕೂ ಅಧಿಕ ಆಕ್ಸಿಜನ್ ಸಿಲಿಂಡರ್‌ಗಳನ್ನು ಒದಗಿಸಿ ಹಲವು ಜನರ ಪ್ರಾಣ ಉಳಿವಿಗೆ ಕಾರಣರಾದ ಮಹಾನ್ ವ್ಯಕ್ತಿ ಈ ಅಕ್ಬರ್ ಪಾಷಾ.
ಆ ಕಠಿಣ ಪರಿಸ್ಥಿತಿಯಲ್ಲಿ ಅವರ ಮಾನವೀಯ ಕಳಕಳಿ ಇಷ್ಟಕ್ಕೆ ನಿಲ್ಲಲಿಲ್ಲ. ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಮಾನ್ವಿ ತಾಲ್ಲೂಕಿನ ಖಾಸಗಿ ಶಾಲಾ ಕಾಲೇಜುಗಳ ಸಾವಿರಾರು ಜನ ಶಿಕ್ಷಕರು ಹಾಗೂ ಉಪನ್ಯಾಸಕರು ಸಂಬಳ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ತಮ್ಮ ಕುಟುಂಬಗಳ ನಿರ್ವಹಣೆಗೆ ಪರದಾಡುತ್ತಿದ್ದರು.
ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಮನವಿ ಮೇರೆಗೆ ಅಕ್ಬರ್ ಪಾಷಾ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್ಲಾ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ, ಆಟೊ ಚಾಲಕರು ಮತ್ತು ಹೋಮ್ ಗಾರ್ಡ್‌ಗಳಿಗೆ ಒಟ್ಟು ₹15 ಲಕ್ಷ ಮೊತ್ತದ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳ ಕಿಟ್‌ಗಳನ್ನು ಉಚಿತವಾಗಿ ವಿತರಿಸುವ ಮೂಲಕ ನೆರವಾದರು.
ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಕುರಿತು ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು. ರಾಬಿತ–ಏ–ಮಿಲ್ಲತ್ ಸಂಸ್ಥೆಯ ವತಿಯಿಂದ ಕೋವಿಡ್ ಪೀಡಿತರನ್ನು ರಾಯಚೂರು ಆಸ್ಪತ್ರೆಗೆ ಸುಲಭವಾಗಿ ಸಾಗಿಸಲು ಉಚಿತವಾಗಿ ಆಂಬುಲೆನ್ಸ್ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.