ADVERTISEMENT

ರಾಯಚೂರು: ಜನ ವಿರೋಧಿ ನೀತಿ ಕೈಬಿಡಲು ಒತ್ತಾಯಿಸಿ ಸಿಪಿಐಎಂ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 11:11 IST
Last Updated 28 ಆಗಸ್ಟ್ 2020, 11:11 IST
ರಾಯಚೂರಿನಲ್ಲಿ ಸಿಪಿಐಎಂ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರದ ಮುಂದೆ ಹಕ್ಕೋತ್ತಾಯಗಳನ್ನು ಸಲ್ಲಿಸಿದರು
ರಾಯಚೂರಿನಲ್ಲಿ ಸಿಪಿಐಎಂ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರದ ಮುಂದೆ ಹಕ್ಕೋತ್ತಾಯಗಳನ್ನು ಸಲ್ಲಿಸಿದರು   

ರಾಯಚೂರು: ದೇಶದಲ್ಲಿ ಕೊವಿಡ್‌ ರೋಗದ ಹಾವಳಿ ಹೆಚ್ಚಾಗಿದ್ದು, ಈಗಾಗಲೇ 50 ಸಾವಿರದಷ್ಟು ಜನರು ಮೃತಪಟ್ಟಿದ್ದಾರೆ. ಪ್ರಧಾನಮಂತ್ರಿ ತಮ್ಮ ವೈಫಲ್ಯ ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಕೇಂದ್ರವು ಅನುಸರಿಸುತ್ತಿರುವ ಜನವಿರೋಧಿ ನೀತಿ ಕೈಬಿಡಬೇಕು ಎಂದು ಒತ್ತಾಯಿಸಿ ಸಿಪಿಐಎಂ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪ್ರಧಾನಿ ಏಕಪಕ್ಷೀಯವಾಗಿ ಘೋಷಿಸಿದ ಲಾಕ್‍ಡೌನ್‌ನಿಂದ ಸೋಂಕು ಹರಡುವುದನ್ನು ತಡೆಯುವಲ್ಲಿ ವಿಫಲವಾಗಿದೆ ಎಂಬುದು ಸಾಬೀತಾಗಿದೆ. ಲಾಕ್‍ಡೌನ್ ತೆರವು ಮಾಡುತ್ತಾ ತಾನು ಉಂಟುಮಾಡಿದ ಸಮಸ್ಯೆಗಳನ್ನು ಎದುರಿಸುವ ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ. ಸರ್ಕಾರವು ರೈಲ್ವೆ, ವಿದ್ಯುತ್, ಬಿಎಸ್‍ಎನ್‍ಎಲ್, ಕಲ್ಲಿದ್ದಲು, ಪೆಟ್ರೋಲಿಯಂ, ಬ್ಯಾಂಕಿಂಗ್, ವಿಮೆ ಮೊದಲಾದ ಹಣಕಾಸು ವಲಯ ಹಾಗೂ ವಿಮಾನಯನ ಖಾಸಗೀಕರಣಕ್ಕೆ ಒಳಪಡಿಸಿ ದೇಶದ ಆಸ್ತಿಯನ್ನು ಲೂಟಿ ಮಾಡಲು ಲಾಭಕೋರ ಕಾರ್ಪೊರೇಟ್ಕಂಪನಿಗಳಿಗೆ ಬಾಗಿಲು ತೆರೆದುಕೊಟ್ಟಿದೆ ಎಂದು ಆರೋಪಿಸಿದರು.

ದೇಶದಲ್ಲಿ ಕಾರ್ಪೊರೇಟ್ಕಂಪನಿಗಳ ಸೇವೆಗೆ ಕೇಂದ್ರವು ಬದ್ಧವಾಗಿದ್ದು, ದಿನದ ದುಡಿಮೆಯನ್ನು 8 ರಿಂದ 12 ಗಂಟೆಗಳಿಗೆ ಏರಿಸಲಾಗುತ್ತಿದೆ. ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನಿರಾಕರಿಸಲಾಗುತ್ತದೆ ಎಂದರು.

ADVERTISEMENT

ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿ ಕೆಲವು ಈಡೇರಿಸಬೇಕೆಂದು ಹಕ್ಕೊತ್ತಾಯಿಸಿದರು.

ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಬಡ ಕುಟುಂಬಗಳಿಗೆ ತಕ್ಷಣದಿಂದ ಮುಂದಿನ 6 ತಿಂಗಳ ವರೆಗೆ ತಿಂಗಳಿಗೆ ₹7500 ನಗದು ವರ್ಗಾವಣೆ ಮಾಡಬೇಕು. ತಕ್ಷಣದಿಂದಲೇ ಅಗತ್ಯವಿರುವ ಎಲ್ಲರಿಗೂ ಮುಂದಿನ ಆರು ತಿಂಗಳವರೆಗೆ ಪ್ರತಿಯೊಬ್ಬ ವ್ಯಕ್ತಿಗೆ 10 ಕೆ.ಜಿ.ಯಂತೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು ಎಂದು ಸೇರಿ ಹಲವು ಬೇಡಿಕೆಗಳ ಪತ್ರ ಸಲ್ಲಿಸಿದರು.

ಕೆ.ಜಿ.ವೀರೇಶ, ಎಚ್.ಪದ್ಮಾ, ಡಿ.ಎಸ್.ಶರಣಬಸವ, ಜೆ.ತಾಯಮ್ಮ ,ಜಿಲಾನಿ, ಗೋಕರಮ್ಮ, ಪ್ರವೀಣರೆಡ್ಡಿ ಮಹಿಪಾಲ್, ಶಂಕ್ರಪ್ಪ, ಬಡೆಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.