ADVERTISEMENT

ಕ್ರೈಸ್ತರ ಮನೆಗಳಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಯೇಸುಸ್ವಾಮಿ ಜನ್ಮದಿನ: ಚರ್ಚ್‌ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 12:27 IST
Last Updated 25 ಡಿಸೆಂಬರ್ 2020, 12:27 IST
ರಾಯಚೂರಿನ ಜಿಲ್ಲಾ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರಿಸ್‌ಮಸ್‌ ಹಬ್ಬದಾಚರಣೆ ಸಂಭ್ರಮದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿ ಶುಭಾಶಯ ಕೋರಿದರು
ರಾಯಚೂರಿನ ಜಿಲ್ಲಾ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರಿಸ್‌ಮಸ್‌ ಹಬ್ಬದಾಚರಣೆ ಸಂಭ್ರಮದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿ ಶುಭಾಶಯ ಕೋರಿದರು   

ರಾಯಚೂರು: ಕೋವಿಡ್‌ ನಿಯಮಗಳನ್ನು ಪಾಲನೆ ಮಾಡುವುದರ ಜೊತೆಯಲ್ಲೇ ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಹಬ್ಬವನ್ನು ಕ್ರೈಸ್ತರೆಲ್ಲರೂ ಸಂಭ್ರಮ, ಸಡಗರದಿಂದ ಸರಳವಾಗಿ ಆಚರಿಸಿ, ಯೇಸುವಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಯೇಸುಕ್ರಿಸ್ತನ ಜನ್ಮದಿನದ ಪ್ರಯುಕ್ತ ಚರ್ಚ್‌ಗಳಲ್ಲಿ ಕೇಕ್‌ ಕತ್ತರಿಸಲಾಯಿತು. ಪರಸ್ಪರ ಸಿಹಿ ತಿನ್ನಿಸಿ ‘ಮೇರಿ ಕ್ರಿಸ್‌ಮಸ್‌’ ಎಂದು ಸಂಬೋದಿಸುತ್ತಾ ಜನ್ಮದಿನದ ಶುಭಾಶಯ ಕೋರುವುದು ವಿಶೇಷವಾಗಿತ್ತು. ರಾಯಚೂರು ನಗರದಲ್ಲಿ ವಿಶಾಲವಾಗಿರುವ ಹಾಗೂ ಪ್ರಾಚೀನವಾದ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅನುಯಾಯಿಗಳು ಸೇರಿದ್ದರು.

ಹೊಸ ಬಟ್ಟೆ ಧರಿಸಿಕೊಂಡು ಯೇಸುವಿನ ಪ್ರಾರ್ಥನೆಯಲ್ಲಿ ಕುಟುಂಬ ಸಮೇತ ಕ್ರೈಸ್ತರು ಭಾಗವಹಿಸಿದ್ದರು. ಕುಟುಂಬದ ಸದಸ್ಯರು ಗುಂಪುಗಳಲ್ಲಿ ಚರ್ಚ್‌ಗಳತ್ತ ಧಾವಿಸುವುದು ಎಲ್ಲೆಡೆಯಲ್ಲೂ ಸಾಮಾನ್ಯ ದೃಶ್ಯವಾಗಿತ್ತು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಯೇಸುವಿಗೆ ನಮನ ಸಲ್ಲಿಸಿ ಹೋಗುತ್ತಿರುವುದು ದಿನವಿಡೀ ಮುಂದುವರಿದಿತ್ತು. ಮಕ್ಕಳ ಕೈಗಳಲ್ಲಿ ಯೇಸು ಜನಿಸಿದ ಸಂಕೇತವಾದ ಹೊಳೆಯುವ ನಕ್ಷತ್ರ (ಸ್ಟಾರ್‌)ದ ಮಾದರಿ ಚಿತ್ರ ಗಮನ ಸೆಳೆಯುವಂತಿತ್ತು.

ADVERTISEMENT

ಜಿಲ್ಲಾ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಮೆಥೋಡಿಸ್ಟ್ ಚರ್ಚ್ ಪಾಸ್ಟರ್ ರೆ. ಸ್ಯಾಮುಯೆಲ್ ಹಾಗೂ ಮೆಥೋಡಿಸ್ಟ್ ಚರ್ಚ್ ಸುಪರಿಡೆಂಟ್ ಎ. ಸಿಮೋನ್ ಅವರು ನೆರೆದಿದ್ದ ಜನರಿಗೆ ಯೇಸುಸ್ವಾಮಿ ಸಂದೇಶಗಳನ್ನು ನೀಡಿದರು. ನೆರೆದಿದ್ದ ಭಕ್ತರೆಲ್ಲರೂ ಸಂದೇಶಗಳನ್ನು ಪುನರುಚ್ಚರಿಸಿ ಭಕ್ತಿಯಿಂದ ನಮಿಸಿದರು. ಯೇಸು ಜನ್ಮ ವೃತ್ತಾಂತವನ್ನು ವಿವರಿಸಲಾಯಿತು.

‘ಪಾಪಿ ಮಾನವರನ್ನು ಸಂರಕ್ಷಣೆ ಮಾಡುವುದಕ್ಕಾಗಿ ದೇವರು ದೇವಮಾನವನನ್ನು ಭೂಮಿಗೆ ಕಳುಹಿಸಿದ ದಿನವನ್ನು ಕ್ರಿಸ್‌ಮಸ್‌ ಎಂದು ಆಚರಿಸಲಾಗುತ್ತಿದೆ. ಪಾಪಿಗಳ ಉದ್ಧಾರಕ್ಕಾಗಿ ಯೇಸುವನ್ನು ದೇವರು ಉಡುಗೊರೆಯಾಗಿ ನೀಡಿದ ಸುದಿನ ಇದಾಗಿದೆ. ಇಡೀ ಪ್ರಪಂಚದಲ್ಲಿ ಈ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ’ ಎಂದು ರೆ. ಸ್ಯಾಮುಯೆಲ್ ಹೇಳಿದರು.

ಆಶಾಪುರ ಮಾರ್ಗದಲ್ಲಿರುವ ಅಗಾಪೆ ಚರ್ಚ್‌, ಬಾಲಯೇಸು ಶಿಕ್ಷಣ ಸಂಸ್ಥೆ ಕ್ಯಾಂಪಸ್‌ ಪಕ್ಕದಲ್ಲಿರುವ ಸೇಂಟ್‌ ಮೇರಿ ಚರ್ಚ್‌ನಲ್ಲಿ ಸಂಭ್ರಮ, ಸಡಗರ ಮನೆಮಾಡಿತ್ತು. ಸ್ಟೇಷನ್‌ ರಸ್ತೆಯಲ್ಲಿರುವ ಸೇಂಟ್‌ ಪ್ರಾನ್ಸಿಸ್‌ ಕ್ಸೇವಿಯರ್‌ ಚರ್ಚ್‌ನಲ್ಲಿಯೂ ವಿಶೇಷ ಪ್ರಾರ್ಥನೆಗಳು ನಡೆದವು. ಎಲ್ಲ ಕಡೆಗಳಲ್ಲೂ ವಿಶೇಷ ಅಲಂಕಾರ ಮಾಡಲಾಗಿತ್ತು. ಪ್ರಾರ್ಥನೆ ಸಲ್ಲಿಸಲು ಬರುತ್ತಿದ್ದ ಜನರು ಎದೆ ಮೇಲೆ ಕೈಯಿಟ್ಟುಕೊಂಡು ಸಂಕಲ್ಪ ಮಾಡುತ್ತಿದ್ದರು.

ಸೇಂಟ್‌ ಮೇರಿ ಚರ್ಚ್‌ ಹಾಗೂ ಮೆಥೋಡಿಸ್ಟ್‌ ಚರ್ಚ್‌ ಆವರಣದಲ್ಲಿ ಯೇಸು ಜನಿಸಿದ ಬೆತ್ಲೇಹಿಮ್‌ ಹಳ್ಳಿಯ ಮಾದರಿಯನ್ನು ನಿರ್ಮಿಸಿದ್ದು ಆಕರ್ಷಕವಾಗಿತ್ತು. ಭತ್ತದ ಹುಲ್ಲಿನಿಂದ ಚಪ್ಪರ ನಿರ್ಮಾಣ ಮಾಡಿ, ಸಿಂಗರಿಸಲಾಗಿತ್ತು. ಅಲ್ಲಲ್ಲಿ ದನಕರು ಮಾದರಿ ಬೊಂಬೆಗಳನ್ನಿಟ್ಟು ಗೋದಲಿ ಮಾಡಲಾಗಿತ್ತು. ಯೇಸು ಜನಿಸಿದ ಬಿಂಬಿಸುವ ಗೋದಲಿಯನ್ನು ಎಲ್ಲರೂ ತದೇಕಚಿತ್ತದಿಂದ ನೋಡುತ್ತಾ ನಿಂತಿದ್ದರು.

ರಾಯಚೂರಿನ ಸ್ಟೇಷನ್ ಸರ್ಕಲ್‌, ಬಸವೇಶ್ವರ ವೃತ್ತ, ನಗರಸಭೆ ಎದುರು, ಮಹಾವೀರ ಸರ್ಕಲ್‌, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತಗಲ್ಲಿ ಸೇರಿ ಅನೇಕ ಕಡೆಗಳಲ್ಲಿ ಶುಭಾಶಯ ಕೋರುವ ಫ್ಲೇಕ್ಸ್‌ಗಳು ರಾರಾಜಿಸುತ್ತಿದ್ದವು.

ಶುಭಾಶಯ ಕೋರಿದ ಮುಖಂಡರು

ರಾಯಚೂರು: ಶಾಸಕ ಡಾ.ಶಿವರಾಜ ಪಾಟೀಲ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮೇಥೋಡಿಸ್ಟ್‌ ಚರ್ಚ್‌ನಲ್ಲಿ ಆಯೋಜಿಸಿದ್ದ ಕ್ರಿಸ್‌ಮಸ್‌ ಸಮಾರಂಭದಲ್ಲಿ ಭಾಗವಹಿಸಿದ್ದರು. ಚರ್ಚ್‌ ಮುಖ್ಯಸ್ಥರು ಕೇಕ್‌ ಕತ್ತರಿಸಿ ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡರು. ಕಾಂಗ್ರೆಸ್‌ ಯುವ ಮುಖಂಡ ರವಿ ಬೋಸರಾಜ, ನಗರಸಭೆ ಸದಸ್ಯ ಜಯಣ್ಣ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವೈ.ಗೋಪಾಲರೆಡ್ಡಿ ಮತ್ತಿತರರು ಇದ್ದರು. ಮುಖಂಡರು ಕ್ರೈಸ್ತರಿಗೆಲ್ಲ ಹಬ್ಬದ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.