ADVERTISEMENT

ಸಿಂಧನೂರು | ಮೊಸಳೆ ದಾಳಿಗೆ ಕುರಿ ಬಲಿ; ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:35 IST
Last Updated 9 ಸೆಪ್ಟೆಂಬರ್ 2024, 15:35 IST
ಸಿಂಧನೂರಿನ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿರುವ ಮೊಸಳೆ
ಸಿಂಧನೂರಿನ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿರುವ ಮೊಸಳೆ   

ಸಿಂಧನೂರು: ನಗರದ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಹಳ್ಳದ ಬಳಿ ಭಾನುವಾರ ಮೇಯಲು ಬಿಟ್ಟಿದ್ದ ಕುರಿ ಮೇಲೆ ದಾಳಿ ನಡೆಸಿ ತಿಂದುಹಾಕಿದೆ. ಇದು ಘಟನೆ ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

‘ಭಾನುವಾರ ಹಳ್ಳದ ದಂಡ್ಯಾಗ್‌ ಕುರಿ ಮೇಯ್ಯಾಕ್‌ ಬಿಟ್ಟಿದ್ವಿ. ಒಮ್ಮೆಲೆ ಸಪ್ಪಳಾತು. ಏನಂತ ನೋಡುದ್ರಾಗ ಮೊಸಳಿ ಕುರಿಗೆ ಬಾಯಿ ಹಾಕಿ ಎಳಕಂಡುಬುಡ್ತು. ಇದ್ನ ನೋಡಿ ಕೈಕಾಲು ನಡಗಿ, ದಿಕ್ಕಪಾಲಾಗಿ ಓಡೋದೆ. ಆಮ್ಯಾಲೇ ಅಲ್ಲಿಂದ ಎಲ್ಲ ಕುರಿ ಹೊಡಕಂದು ಹೋದ್ವಿ. ಈಗ ಹಳ್ಳದ ಸನ್ಯಾಕ ಹೋಗಬೇಕಂದ್ರ ಅಂಜಿಕಿ ಬರಾಕತೈತಿ’ ಎಂದು ಕುರಿಗಾಹಿ ಬಸವರಾಜ ಸಿದ್ದಾಪುರ ಪ್ರತಿಕ್ರಿಯಿಸಿದ್ದಾರೆ.

ಅರಣ್ಯ ಸಿಬ್ಬಂದಿ ಭೇಟಿ, ಪರಿಶೀಲನೆ: ವಿಷಯ ಅರಿತ ಅರಣ್ಯ ಇಲಾಖೆ ಸಿಬ್ಬಂದಿ, ‘‍ನಮ್ಮ ಕರ್ನಾಟಕ ಸೇನೆ’ಯ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಸೇರಿದಂತೆ ಮತ್ತಿತರರು ಹಳ್ಳದ ದಡಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

‌‌‘ಪರಿಶೀಲನೆ ವೇಳೆ ಮೊಸಳೆ ಕಂಡುಬಂದಿಲ್ಲ. ಮೇಲಧಿಕಾರಿಗಳಿಗೆ ವಿಷಯ ತಿಳಿಸಿ, ಮೊಸಳೆ ಪತ್ತೆ ಹಚ್ಚಲಾಗುವುದು’ ಎಂದು ಅರಣ್ಯ ಸಿಬ್ಬಂದಿ ಪ್ರತಿಕ್ರಿಯಿಸಿದರು.

‌‘ಯಾವುದೇ ಅವಘಡ ಸಂಭವಿಸುವ ಮುಂಚೆ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಮೊಸಳೆ ಸೆರೆ ಹಿಡಿದು, ಬೇರೆಡೆ ಸಾಗಿಸಬೇಕು. ಮೊಸಳೆ ಪ್ರತ್ಯಕ್ಷವಾಗಿದ ಕುರಿತು ಸಿಂಧನೂರು ಹಳ್ಳ ಪ್ರದೇಶದ ವ್ಯಾಪ್ತಿಯಲ್ಲಿ ಎಚ್ಚರಿಕೆ ನಾಮಫಲಕ ಹಾಕಬೇಕು. ಡಂಗೂರ ಸಾರಿ ಜಾಗೃತಿ ಮೂಡಿಸಬೇಕು’ ಎಂದು ನಮ್ಮ ಕರ್ನಾಟಕ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ, ರಾಜ್ಯ ಘಟಕದ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥ ಗುರುವಿನಮಠ, ದುರುಗೇಶ ಕೋಣದ್, ವೀರೇಶ ಹಾಗೂ ಸುಕಾಲಪೇಟೆಯ ನಿವಾಸಿಗಳು, ಕುರಿಗಾಹಿಗಳು ಇದ್ದರು.

ಸಿಂಧನೂರಿನ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷ್ಯವಾಗಿರುವ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.