ಶಕ್ತಿನಗರ (ರಾಯಚೂರು ಜಿಲ್ಲೆ): ಸಮೀಪದ ಗಂಜಳ್ಳಿ ಗ್ರಾಮದಲ್ಲಿ ಶುಕ್ರವಾರ ಕುರಿಗಳಿಗೆ ನೀರು ಕುಡಿಸಲು ನದಿಗೆ ಇಳಿದಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದಿದೆ.
ರಾಯಚೂರು ತಾಲ್ಲೂಕಿನ ಗಂಜಳ್ಳಿ ಗ್ರಾಮದ ಜಯಪ್ಪ ಅವರ ಮಗ ವಿಶ್ವ (12) ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಅವುಗಳಿಗೆ ನೀರು ಕುಡಿಸಲು ಕೃಷ್ಣಾ ನದಿಗೆ ಇಳಿದಾಗ ಮೊಸಳೆ ದಾಳಿ ಮಾಡಿ ಬಾಲಕನನ್ನು ಎಳೆದೊಯ್ದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ಬಾಲಕ ಕಾಣಿಸಲಿಲ್ಲ. ತಕ್ಷಣ ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಅಗ್ನಿಶಾಮಕದಳದ ಸಿಬ್ಬಂದಿಯನ್ನು ಕರೆಸಿಕೊಂಡು ಗ್ರಾಮಸ್ಥರ ಸಹಕಾರದೊಂದಿಗೆ ಬಾಲಕನಿಗಾಗಿ ಶೋಧಿಸಿದ್ದಾರೆ.
‘ಕತ್ತಲಾದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ನಿಲ್ಲಿಸಲಾಗಿದೆ. ಶನಿವಾರ ಬೆಳಿಗ್ಗೆ ಕಾರ್ಯಚರಣೆ ಮುಂದುವರಿಯಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.