ಮುದಗಲ್: ನಿರಂತರ ಮಳೆಯಿಂದ ತೊಗರಿ, ಮೆಣಸಿನಕಾಯಿ, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಇತರ ಬೆಳೆಗಳಿಗೆ ಹಾನಿಯಾಗಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆಯಾಗಿದೆ. ಇಳುವರಿ ಕುಸಿಯುವ ಆತಂಕ ಎದುರಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿ ತೊಗರಿ ಬೆಳೆಯಲಾಗುತ್ತದೆ. 500 ಎಕರೆ ವಿಸ್ತೀರ್ಣದಲ್ಲಿ ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದಾರೆ. ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸತತ ಮಳೆಗೆ ಎಲ್ಲ ಫಸಲು ನಲುಗಿದ್ದು, ಕೊಳೆ ರೋಗಕ್ಕೆ ತುತ್ತಾಗಿದೆ. ಗಿಡಗಳು ಒಣಗಿ ನಿಂತಿವೆ. ರೈತರು ಫಸಲು ಉಳಿಸಿಕೊಳ್ಳುವ ಚಿಂತೆಯಲ್ಲಿದ್ದಾರೆ.
‘ಹೆಚ್ಚಿದ ಮಳೆಯಿಂದ ಗಿಡಗಳ ನಿರ್ವಹಣೆಗೆ ತೊಂದರೆಯಾಯಿತು. ಕಾರ್ಮಿಕರ ಕೂಲಿ ವೆಚ್ಚವೂ ಏರಿತು. ಹೆಚ್ಚು ಕೂಲಿ ನೀಡಿದರೂ ಕಾರ್ಮಿಕರು ಸಿಗುತ್ತಿಲ್ಲ. ಮಳೆಯಿಂದ ಬೆಳೆಗಳಿಗೆ ರೋಗ ತಗುಲಿದೆ’ ಎಂದು ಹೇಳುತ್ತಾರೆ ರೈತರು.
ಹೆಚ್ಚು ಮಳೆ ಸುರಿದಿದ್ದರಿಂದ ತೊಗರಿ ಎಲೆ ಉದುರಿವೆ. ಶೇ 50ರಷ್ಟು ನಾಶವಾಗಿದೆ. ಬೇರು ಕೊಳೆಯುತ್ತಿದೆ. ದ್ರಾವಣ ಸಿಂಪಡಿಸಿದರೂ ಮಳೆ ಬಂದರೆ ಉಪಯೋಗವಾಗದು. ಮೆಕ್ಕೆಜೋಳ ಬೆಳೆ ನೆಲ ಬಿಟ್ಟು ಮೇಲಕ್ಕೆ ಬರುತ್ತಿಲ್ಲ. ಕೆಂಪು ಬಣ್ಣಕ್ಕೆ ತಿರುಗಿದೆ. ಹತ್ತಿ ಬೆಳೆಗೆ ತಾಮ್ರ ರೋಗ ಕಾಣಿಸಿಕೊಂಡಿದೆ. ಮಳೆ ಹೆಚ್ಚಾಗಿದ್ದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚಳ, ಪೋಷಕಾಂಶದ ಕೊರತೆ ಮತ್ತು ಸೂರ್ಯನ ಬಿಸಿಲಿನ ಕೊರತೆಯಿಂದ ಈ ಸಮಸ್ಯೆ ಕಾಡುತ್ತಿದೆ.
ಹವಾಮಾನ ವೈಪರೀತ್ಯದಿಂದಾಗಿ ನಾಗರಾಳ, ಜೂಲಗುಡ್ಡ, ಹೊಸೂರು, ಆನೆಹೊಸೂರು, ರಾಂಪುರ, ಬೆಂಡೋಣಿ, ಬಯ್ಯಾಪುರ ಸೇರಿದಂತೆ ಇನ್ನಿತರ ಗ್ರಾಮದ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆ ನೆಲ ಬಿಟ್ಟು ಮೇಲಕ್ಕೆ ಬರುತ್ತಿಲ್ಲ. ಗಿಡದ ಬೆಳವಣಿಗೆ ಕುಂಟಿತಗೊಳಿಸಿ ಮುಟ್ಟರಿ ರೋಗ ಹುಟ್ಟಿಕೊಂಡಿದೆ. ಇದನ್ನು ಹೋಗಲಾಡಿಸಲು ರೈತರು ಎರಡು ದಿನಗಳಿಗೆ ಒಂದು ಬಾರಿ ಬೆಲೆ ಬಾಳುವ ಔಷಧ ಸಿಂಪಡಣೆ ಮಾಡುತ್ತಿದ್ದರೂ, ರೋಗ ಹತೋಟಿಗೆ ಬರುತ್ತಿಲ್ಲ. ಕುರಿ, ಮೇಕೆಗಳಿಗೆ ಕಾಲು ಬೇನೆ ಬಂದು ಮೃತಪಡುತ್ತಿವೆ. ಕುರಿಗಾರರು ದುಬಾರಿ ಔಷಧ ತಂದು ಹಾಕಿದರೂ ರೋಗಗಳು ಹತೋಟಿಗೆ ಬರುತ್ತಿಲ್ಲ. ದಿನಕ್ಕೊಂದು ಕುರಿ ಸಾವನ್ನಪ್ಪುವುದನ್ನು ಕಂಡು ಕಂಗಾಲಾಗಿದ್ದಾರೆ.
ಸರ್ಕಾರ ಸೂಚಿಸಿದಂತೆ ಹಾನಿಗೆ ಒಳಗಾದ ಬೆಳೆಗಳ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಗ್ರಾಮ ಆಡಳಿತಾಧಿಕಾರಿ ಧರ್ಮಸಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.