ರಾಯಚೂರು: ಮುನ್ನೂರು ಕಾಪು ಸಮಾಜವು ಮುಂಗಾರು ಹಬ್ಬದ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮ ಬಿಸಿಲೂರಲ್ಲಿ ಕಲಾಲೋಕವನ್ನು ಅನಾವರಣಗೊಳಿಸಿದೆ.
ಮುನ್ನೂರು ಕಾಪು ಸಮಾಜವು ರೈತರ ಕಾರಹುಣ್ಣಿಮೆ ಹಬ್ಬವನ್ನು ‘ಮುಂಗಾರು ಹಬ್ಬ’ ಶೀರ್ಷಿಕೆ ಅಡಿಯಲ್ಲಿ ನಗರದ ರಾಜೇಂದ್ರ ಗಂಜ್, ನಿಜಲಿಂಗಪ್ಪ ಕಾಲೊನಿ, ಐಡಿಎಸ್‌ಎಂಟಿ ಲೇಔಟ್ ಬಡಾವಣೆಗಳಲ್ಲಿ ಆಯೋಜಿಸಿ ನಗರದ ಜನರಿಗೆ ಸಾಂಸ್ಕೃತಿಕ ರಸದೌತಣ ನೀಡುತ್ತಿದೆ.
ಅಕ್ಕಮಹಾದೇವಿಯ ವಚನ ನೃತ್ಯ ದೊಂದಿಗೆ ಆರಂಭವಾದ ನೃತ್ಯ ಕಾರ್ಯಕ್ರಮದಲ್ಲಿ ಚೆನ್ನಪ್ಪ ಚನ್ನ ಗೌಡ ಜಾನಪದ ಗೀತೆ, ದೀಪವು ನಿನ್ನದೆ ಗಾಳಿಯೂ ನಿನ್ನದೆ ಭಾವಗೀತೆ ಸೇರಿದಂತೆ ವಿವಿಧ ಗೀತೆಗಳಿಗೆ ಹೆಣ್ಣುಮಕ್ಕಳು ಹೆಜ್ಜೆ ಹಾಕಿದರು.
ಎಲ್‌ವಿಡಿ ಕಾಲೇಜಿನ ತಂಡ, ಬಿಆರ್‌ಬಿ ಕಾಲೇಜಿನ ತಂಡ, ಎಸ್‌ಆಕ್‌ಕೆ ಬಿ.ಎಡ್ ಕಾಲೇಜು ತಂಡ, ಎಸ್‌ಕೆ ಇಎಸ್ ಪ್ಯಾರಾಮೆಡಿಕಲ್ ಕಾಲೇಜಿನ ತಂಡ, ಶ್ರೀ ವೀರಶೈವ ಬಿ.ಇಡಿ ಕಾಲೇಜಿನ, ಸರ್ಕಾರಿ ಪದವಿ ಕಾಲೇಜಿನ ತಂಡ, ಪೂರ್ಣಿಮಾ ಆಯುರ್ವೇದ ಕಾಲೇಜಿನ ತಂಡ, ತುಮಕೂರು, ಧಾರವಾಡ, ವಿಜಯಪುರದಿಂದ ಆಗಮಿಸಿದ್ದ ಕಲಾ ತಂಡಗಳು ನೃತ್ಯ ಪ್ರದರ್ಶನ ನೀಡಿದವು.
ನವಿಲು ನೃತ್ಯ, ಹಲಿಗೆ ತಾಳಕ್ಕೆ ಹೆಜ್ಜೆ, ಕೋಲಾಟ, ಸಾಂಪ್ರದಾಯಿಕ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯ ಹೆಚ್ಚು ಗಮನ ಸೆಳೆದವು. ಕಲಾವಿದರ ಪೋಷಾಕು ಹಾಗೂ ವೇದಿಕೆಯಲ್ಲಿನ ಬೆಳಕಿನ ವ್ಯವಸ್ಥೆ ಪ್ರತಿಯೊಬ್ಬರನ್ನೂ ಮೆಚ್ಚಿಸಿತು.
ರೈತರ ಹಬ್ಬವಾಗಿರುವ ಕಾರಣ ಮುನ್ನೂರು ಕಾಪು ಸಮಾಜವು ಎಲ್ಲ ಸಮುದಾಯದವರನ್ನೂ ಸೇರಿಸಿ ಕಾರ್ಯಕ್ರಮ ನಡೆಸುತ್ತಿದೆ. ಬಿಸಿಲೂರಲ್ಲಿ ಭಾತೃತ್ವ ಭಾವನೆಯನ್ನೂ ಗಟ್ಟಿಗೊಳಿಸುತ್ತಿದೆ.
ಸಾಂಸ್ಕೃತಿಕ ವೈಭವಕ್ಕೆ ಮೆರುಗು: ‘ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಕಾರ್ಯಕ್ರಮಗಳ ಅದ್ದೂರಿ ಆಯೋಜನೆ ಮೂಲಕ ಮತ್ತೆ ಸಾಂಸ್ಕೃತಿಕ ವೈಭವಕ್ಕೆ ಮೆರುಗು ತುಂಬಿದೆ’ ಎಂದು ಶಾಸಕ ಶಿವರಾಜ ಪಾಟೀಲ ಹೇಳಿದರು.
ನಗರದ ಶಾರದಾ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಶಿಸಿ ಹೋಗುತ್ತಿರುವ ಸಾಂಸ್ಕೃತಿಕ ಭವ್ಯ ಪರಂಪರೆಯನ್ನು ಮತ್ತೆ ಮುನ್ನೂರು ಕಾಪು ಸಮಾಜ ರಕ್ಷಣೆ ಮಾಡುತ್ತಿದೆ. ಮುನ್ನೂರು ಕಾಪು ಸಮಾಜದ ಕಾರ್ಯ ಶ್ಲಾಘನೀಯ’ ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಉದ್ಯಮಿ ಸಾವಿತ್ರಿ ಪುರುಷೋತ್ತಮ ಮಾತನಾಡಿದರು. ಅಭಿನವ ರಾಚೋಟಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹಬ್ಬದ ರೂವಾರಿ ಎ.ಪಾಪಾರೆಡ್ಡಿ, ಜಯವಂತರಾವ್ ಪತಂಗಿ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಕಡಗೋಲ್ ಆಂಜನೇಯ, ಬಾಬು ಭಂಡಾರಿಗಲ್, ಬಸವರಾಜಪ್ಪ, ಅಮರೇಗೌಡ ಹಂಚಿನಾಳ, ಶಶಿರಾಜು, ಪ್ರಭು ಶಾಸ್ತ್ರ,ಬಿ ಗೋವಿಂದರಾಜ್, ಡಾ. ಆನಂದ, ಡಿ.ಕೆ. ಮುರಳೀಧರ, ಮಹಾದೇವಪ್ಪ ಏಗನೂರು, ಗುಡ್ಸಿ ನರಸರೆಡ್ಡಿ, ತಿಮ್ಮರೆಡ್ಡಿ, ಬುಡತಪ್ಪಗಾರು, ಮುನ್ನೂರು ಕಾಪು ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.