
ಜಾಗೃತಿ ಓಟಕ್ಕೆ ನ್ಯಾಯಾಧೀಶರಿಂದ ಚಾಲನೆ | ಟೀಶರ್ಟ್ ಧರಿಸಿ ಯುವಕರು ಓಟದಲ್ಲಿ ಭಾಗಿ | ಉತ್ಸಾಹ ತೋರಿದ ಕಾಲೇಜು ವಿದ್ಯಾರ್ಥಿಗಳು
ರಾಯಚೂರು: ‘ಸೈಬರ್ ಅಪರಾಧ ಮಾಡುವ ಉದ್ದೇಶದಿಂದಲೇ ಕೆಲವರು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಾರುತಿ ಬಗಾಡೆ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸೈಬರ್ ಅಪರಾಧ ತಡೆ ಜಾಗೃತಿಗೆ ಆಯೋಜಿಸಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸೈಬರ್ ಅಪರಾಧಗಳು ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿವೆ. ಈ ಅಪರಾಧಗಳಲ್ಲಿ ಒಳಗಾಗುತ್ತಿರುವವರೂ, ಅಪರಾಧ ಮಾಡುವವರೂ ಇಬ್ಬರೂ ಶಿಕ್ಷಣ ಪಡೆದವರೇ ಆಗಿದ್ದಾರೆ. ಹತ್ತು ರೂಪಾಯಿ ಕಳ್ಳತನ ಮಾಡುವವರಿಂದ ಇಂದು ಬ್ಯಾಂಕ್ ಖಾತೆಯಲ್ಲಿನ ಲಕ್ಷಾಂತರ ಹಣ ಖಾಲಿ ಮಾಡುವ ಕಳ್ಳರ ಕಾಲ ಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಮಾತನಾಡಿ, ‘ಈ ತಿಂಗಳು ದೇಶದಾದ್ಯಂತ ಸೈಬರ್ ವಿರೋಧಿ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತಿದೆ. ತಂತ್ರಜ್ಞಾನ ಸೌಲಭ್ಯಗಳು ಗ್ರಾಮೀಣ ಭಾಗಗಳಿಗೂ ತಲುಪಿರುವ ಕಾರಣ ಸೈಬರ್ ಅಪರಾಧಗಳು ಎಲ್ಲೆಡೆ ಹೆಚ್ಚುತ್ತಿವೆ. ವಿಶೇಷವಾಗಿ ಯುವಕರು ಈ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಬಳಕೆಯ ಮೊದಲು ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಗುರುರಾಜ ಬಿರಾದಾರ ಮಾತನಾಡಿ, ಸೈಬರ್ ಅಪರಾಧ ವಿರುದ್ಧ ಸಾಮಾಜಿಕ ಜಾಗೃತಿ ಅಗತ್ಯವಿದೆ. ಸಮಾಜ ಬದಲಾಗಬೇಕಾದರೆ ಯುವಕರು ಮೊದಲು ಇಂತಹ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ ವಿಭಾಗ) ಹರೀಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಕಾನೂನು ಸುವ್ಯವಸ್ಥೆ ವಿಭಾಗ) ಕುಮಾರಸ್ವಾಮಿ, ಡಿವೈಎಸ್ ಪಿ ಶಾಂತವೀರ, ಪ್ರಮಾಣನಂದ ಘೋಡಕೆ, ದತ್ತಾತ್ರೇಯ ಕರ್ನಾಡ, ಸೈಬರ್ ಅಪರಾಧ ವಿಭಾಗದ ಡಿವೈಎಸ್‌ಪಿ ಶಿವಕುಮಾರ ಹೊಗಿಬಂಡಿ ಉಪಸ್ಥಿತರಿದ್ದರು.
ಮ್ಯಾರಥಾನ್: ಗೋವಿಂದ, ಭಾಗ್ಯಲಕ್ಷ್ಮೀ ಪ್ರಥಮ
ರಾಯಚೂರು: ಸೈಬರ್ ಅಪರಾಧ ತಡೆ ಮಾಸಾಚರಣೆ–2025 ಪ್ರಯುಕ್ತ ರಾಯಚೂರು ಜಿಲ್ಲಾ ಪೊಲೀಸರ ವತಿಯಿಂದ ಸೈಬರ್ ಸುರಕ್ಷತೆಗಾಗಿ ಮ್ಯಾರಥಾನ ನಡೆಯಿತು.
ಮ್ಯಾರಥಾನ್‌ನಲ್ಲಿ ಗೋವಿಂದ ಪ್ರಥಮ ಸ್ಥಾನ, ತಿಮ್ಮಪ್ಪ ದ್ವಿತೀಯ ಸ್ಥಾನ ಹಾಗೂ ನರೇಶ ತೃತೀಯ ಸ್ಥಾನ ಗಳಿಸಿದರು. ಮಹಿಳಾ ವಿಭಾಗದಲ್ಲಿ ಭಾಗ್ಯಲಕ್ಷ್ಮೀ ಪ್ರಥಮ, ಮನುಷಾ ಪಾಟೀಲ ದ್ವಿತೀಯ ಮತ್ತು ಪ್ರೇರಣಾ ತೃತೀಯ ಸ್ಥಾನ ಪಡೆದರು.
ಜಿಲ್ಲಾ ಪೊಲೀಸ್ ಮುಖ್ಯಾಲಯದ ಆವರಣದಿಂದ ಆರಂಭವಾದ ಓಟ ಗಂಜ್ ಸರ್ಕಲ್, ಚಂದ್ರಬಂಡ ಸರ್ಕಲ್, ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್ ಹಾಗೂ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ರಂಗ ಮಂದಿರ ಆವರಣಕ್ಕೆ ಬಂದು ಸಮಾರೋಪಗೊಂಡಿತು. ಪೊಲೀಸ್ ಅಧಿಕಾರಿಗಳು, ಪೊಲೀಸರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕ್ರಿಕೆಟ್: ಪೊಲೀಸ್ ಅಧಿಕಾರಿಗಳ ತಂಡಕ್ಕೆ ಜಯ
ಸೈಬರ್ ಅಪರಾಧ ತಡೆ ಮಾಸಾಚರಣೆ–2025 ಪ್ರಯುಕ್ತ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಪತ್ರಕರ್ತರ ತಂಡದ ಮಧ್ಯೆ ನಡೆದ 10 ಓವರ್‌ಗಳ ಕ್ರಿಕೆಟ್ ಪಂದ್ಯದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ವಿರೋಚಿತ ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.