
ರಾಯಚೂರು: ‘ಇಂದಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ ವಂಚಕರು ಡಿಜಿಟಲ್ ಮೂಲಕವೇ ಹಣ ಲೂಟಿ ಮಾಡಲು ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಹೆಚ್ಚು ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಸೈಬರ್ ಕ್ರೈಂ ಜಾಗೃತಿ ಹಾಗೂ ಕಿರು ಸಾಕ್ಷ್ಯ ಚಿತ್ರದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಂತ್ರಜ್ಞಾನ ಎಷ್ಟು ಬೆಳೆಯುತ್ತಿದೆಯೋ, ಅದರ ಜತೆಗೆ ಅಪರಾಧಗಳೂ ಹೊಸ ಸ್ವರೂಪಗಳಲ್ಲಿ ಕಾಣಿಸಿ ಕೊಳ್ಳತೊಡಗಿವೆ. ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬರು ತಮ್ಮ ಪರಿಚಯದವರು ಹಾಗೂ ಗೆಳೆಯರೊಂದಿಗೆ ಕನಿಷ್ಟ 10 ಸೈಬರ್ ಅಪರಾಧಗಳ ಬಗ್ಗೆ ಜನಕ್ಕೆ ಮನವರಿಕೆ ಮಾಡಿದಲ್ಲಿ ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಮಾಡಬಹುದಾಗಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಮಾತನಾಡಿ, ‘21ನೇ ಶತಮಾನ ತಂತ್ರಜ್ಞಾನದ ಯುಗವಾಗಿದೆ. ಸೈಬರ್ ಅಪರಾಧಗಳಿಗೆ ಹಿರಿಯ ನಾಗರಿಕರನ್ನೇ ಹೆಚ್ಚಾಗಿ ಗುರಿಯಾಗಿಸಲಾಗುತ್ತಿದೆ’ ಎಂದು ತಿಳಿಸಿದರು.
'ಶಾಲಾ-ಕಾಲೇಜು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಎಚ್ಚರದಿಂದ ಮೊಬೈಲ್ ಬಳಕೆ ಮಾಡಬೇಕು. ಸೈಬರ್ ಕ್ರೈಂ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ ಮಾತನಾಡಿ, ‘ಕೆಲ ವ್ಯಕ್ತಿಗಳು ಬೇರೋಬ್ಬರ ಅಸಾಹಕತೆಯನ್ನೇ ದುರ್ಬಳಕೆ ಮಾಡಿಕೊಂಡು ಸೈಬರ್ ವಂಚನೆ ನಡೆಸಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳು ಹಾಗೂ ನಿವೃತ್ತಿ ಹೊಂದಿದ ಅಧಿಕಾರಿಗಳು ಹೆಚ್ಚಾಗಿ ಬಲಿಯಾಗುತ್ತಾರೆ ಎಂಬ ಕಟುವಾಸ್ತವವನ್ನು ಸಾರ್ವಜನಿಕರು ಅರಿಯಬೇಕು’ ಎಂದು ತಿಳಿಸಿದರು.
‘ಪಾರ್ಸಲ್, ಕೋರಿಯರ್ ಹೆಸರಿನಲ್ಲಿ ಕರೆಮಾಡಿ ಕೆಲವರು ವಂಚನೆ ಮಾಡುತ್ತಿದ್ದು, ಎಚ್ಚರದಿಂದ ಇರಬೇಕು. ಕಾನೂನು ಬಾಹಿರ ವಸ್ತುಗಳನ್ನು ಹೊರದೇಶಕ್ಕೆ ರವಾನೆ ಮಾಡಿದ್ದಿರಿ. ಅದಕ್ಕಾಗಿ ನಿಮಗೆ ವಿಡಿಯೊ ಕಾಲ್ ಮೂಲಕ ವಿಚಾರಣೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಣ ಲೂಟಿ ಮಾಡುವವ ಬಗ್ಗೆ ಎಚ್ಚರವಾಗಿರಬೇಕು’ ಎಂದು ಹೇಳಿದರು.
ರಿಮ್ಸ್ ನಿರ್ದೇಶಕ ಡಾ.ರಮೇಶ ಬಿ.ಕೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಡಾ.ಎ.ಆರ್.ಕುರಬರ, ನಿವೃತ್ತ ಅಧಿಕಾರಿ ಪರಮವೀರ, ಎಸ್.ಬಿ.ಪಾಟೀಲ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ–2 ಜಿ. ಹರೀಶ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ–1 ಕುಮಾರಸ್ವಾಮಿ, ಮಹಾದೇವಪ್ಪ ಹಾಗೂ ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕಾಲೇಜ್ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಕಿರು ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಸೈಬರ್ ವಂಚನೆಗೆ ಒಳಗಾದವರು ಹೇಗೆ ಮೋಸಕ್ಕೊಳಗಾದರು ಎನ್ನುವುದನ್ನು ತಿಳಿಸಲಾಯಿತು. ಅಪರಾಧಿಗಳಿಂದ ಹಣ ವಸೂಲಿ ಮಾಡಿರುವುದನ್ನು ಸಹ ವಿವರಿಸಲಾಯಿತು. ಸೈಬರ್ ಅಪರಾಧ ವಿಭಾಗದ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ ಸ್ವಾಗತಿಸಿದರು.
ಓಟಿಪಿ ಹೇಳದಿದ್ದರೂ ಖಾತೆಯಿಂದ ಹಣ ಮಾಯ ಹಿರಿಯ ನಾಗರಿಕರನ್ನೇ ಗುರಿ ಮಾಡುವ ವಂಚಕರು ಭಯ ಹುಟ್ಟಿಸಿ ಹಣ ಕೀಳುವ ಸೈಬರ್ ವಂಚಕರು
ಮೊಬೈಲ್‌ನಲ್ಲಿ *#067# ಟೈಪ್ ಮಾಡಿ ಕಾಲಫಾರ್ವಡ್ ಚೆಕ್ ಮಾಡಬೇಕು. ಕಾಲಫಾರ್ವಡ್ ಆಗಿದ್ದರೆ #002# ಟೈಪ್ ಮಾಡಿ ಸಂದೇಶ ಕಳಿಸಿದರೆ ಸ್ಟಾಪ್ ಆಗಲಿದೆ.
–ವೆಂಕಟೇಶ ಹೊಗಿಬಂಡಿ ಸೈಬರ್ ಅಪರಾಧ ವಿಭಾಗದ ಡಿವೈಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.