ರಾಯಚೂರು: ಫೇಸ್‌ಬುಕ್‌ನಲ್ಲಿ ಟ್ರೇಡ್ ಎಂಐಎಫ್‌ಎಸ್ ಜಾಹೀರಾತಿಗೆ ಮರಳಾಗಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದ ರಾಯಚೂರಿನ ವ್ಯಕ್ತಿಗೆ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ₹18.29 ಲಕ್ಷ ಮರಳಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದರು.
ವಿದ್ಯಾನಗರದ ಲಕ್ಷ್ಮಿಕಾಂತ ವೆಂಕೋಬಾಚಾರ್ ಅವರು 2020ರ ಆಗಸ್ಟ್‌ನಿಂದ ಏಪ್ರಿಲ್ 2021ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗೆ ₹ 58,57,450 ಹೂಡಿಕೆ ಮಾಡಿದ್ದರು. ಲಾಭಾಂಶ ಬಾರದಿದ್ದಾಗ ಮೋಸ ಹೋಗಿರುವುದು ಮನವರಿಕೆಯಾಗಿದೆ. ಹೀಗಾಗಿ 2021ರ ಅಕ್ಟೋಬರ್ 25ರಂದು ಲಕ್ಷ್ಮಿಕಾಂತ ವೆಂಕೋಬಾಚಾರ್ ಅವರು ಸೈಬರ್ ಠಾಣೆಗೆ ದೂರಿದ್ದರು ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೀಲಕರೈನ ಬಥುರುಸ್ಮಾನ್ ಮೊಹಮ್ಮದ್ ಹುಸೇನ್ ಎನ್ನುವವನು ತನ್ನ ಸಂಬಂಧಿಕರ ಖಾತೆಗೆ ಅವರಿಗೆ ತಿಳಿಯದಂತೆ ಹಣ ಹಾಕಿಸಿಕೊಂಡಿದ್ದ. ಆರೋಪಿ ಮೃತಪಟ್ಟಿದ್ದು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಫಿರ್ಯಾದಿದಾರರಿಗೆ ₹18,29,425 ಹಣ ಮರಳಿಸಲಾಗಿದೆ ಎಂದು ತಿಳಿಸಿದರು.
ಸೈಬರ್ ಕ್ರೈಂ ಠಾಣೆಯ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ, ತನಿಖಾ ಸಹಾಯಕ ರಾಜಪ್ಪ, ಪೊಲೀಸ್ ಇನ್‌ಸ್ಪೆಕ್ಟರ್ ರಾಜಕುಮಾರ ವಾಜಂತ್ರಿ, ವಿಕ್ರಂಸಿಂಹ ರೆಡ್ಡಿ, ಪ್ರವೀಣಕುಮಾರ ಪ್ರಕರಣ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ1ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ2 ಹರೀಶ್ ಹಾಗೂ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.