ರಾಯಚೂರು: ‘ಹಣಕಾಸು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗ್ರಾಹಕರ ನಿರ್ಲಕ್ಷ್ಯದಿಂದಾಗಿ ಹಣಕಾಸು ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ವ್ಯವಹರಿಸುವುದು ಹೆಚ್ಚು ಸುರಕ್ಷಿತ’ ಎಂದು ನಿವೃತ್ತ ಡಿವೈಎಸ್‌ಪಿ ಶ್ರೀಧರ ದೊಡ್ಡಿ ಸಲಹೆ ನೀಡಿದರು.
ಬಜಾಜ್ ಫೈನಾನ್ಸ್ ವತಿಯಿಂದ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ನಡೆದ ಸೈಬರ್ ವಂಚನೆ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಹಣಕಾಸು ಸಂಸ್ಥೆಗಳಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯುವ ಹಾಗೂ ನಕಲಿ ದಾಖಲೆ ಒದಗಿಸಿ ಸಾಲ ಪಡೆದು ಪರಾರಿಯಾಗುವ ಪ್ರಕರಣಗಳು ಇವೆ. ಇಂತಹ ಪ್ರಕರಣಗಳಿಗೆ ಬೇಜವಾಬ್ದಾರಿಯೇ ಮುಖ್ಯ ಕಾರಣ’ ಎಂದು ಅಭಿಪ್ರಾಯಪಟ್ಟರು.
‘ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆ, ವೆಸ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೊಡ್ಡ ಮೊತ್ತದ ಪ್ರಕರಣಗಳು ಸೈಬರ್ ಠಾಣೆಯಲ್ಲಿ ದಾಖಲಾಗಿವೆ. ಒಬ್ಬ ವಂಚಕ ಒಂದು ಕೆ.ಜಿ ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಲಕ್ಷಾಂತರ ಸಾಲ ಪಡೆದು ಪರಾರಿಯಾಗಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಸಾಲ ಪಡೆದ ದಾಖಲೆ ಒದಗಿಸಿ ಕಾರು ತೆರೆದುಕೊಂಡು ಪರಾರಿಯಾಗಿದ್ದಾನೆ’ ಎಂದು ತಿಳಿಸಿದರು.
‘ಹಣಕಾಸು ಸಂಸ್ಥೆಯ ಸಿಬ್ಬಂದಿ ಸಹ ಎಲ್ಲ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಬೇಕು. ಚಿನ್ನ ಅಡವಿಟ್ಟರೆ ಚಿನ್ನದ ಪರಿಶುದ್ಧತೆಯನ್ನು ಖಾತರಿ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸದರ್ ಬಜಾರ್ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಉಮೇಶ ಕಾಂಬಳೆ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ವ್ಯವಹರಿಸುವವರು ಹೆಚ್ಚು ಜಾಗರೂಕರಾಗಿರಬೇಕು’ ಎಂದು ತಿಳಿಸಿದರು.
‘ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಮೊಬೈಲ್ ನಂಬರ್ ಪಡೆಯುತ್ತಾರೆ. ವಂಚಕರು ನಯವಾಗಿ ಮಾತನಾಡಿ ಬ್ಯಾಂಕ್ ಖಾತೆ ನಂಬರ್, ಎಟಿಎಂ ನಂಬರ್ ಪಡೆದುಕೊಳ್ಳುತ್ತಾರೆ. ನಂತರ ಒಟಿಪಿ ಸಹ ವಿಚಾರಿಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಯಾವ ವ್ಯಕ್ತಿ ಫೋನ್ ಮಾಡಿದರೂ ಮೊಬೈಲ್‌ನಲ್ಲಿ ಮಾಹಿತಿ ಹಂಚಿಕೊಳ್ಳಬಾರದು. ಬ್ಯಾಂಕ್ ಶಾಖೆಯಲ್ಲಿ ವಿಚಾರಿಸಬೇಕು. ಬ್ಯಾಂಕಿಂಗ್‌ಗೆ ಸಂಬಂಧಿಸಿದ ಮಾಹಿತಿಯನ್ನು ಬ್ಯಾಂಕ್‌ನಲ್ಲೇ ತಿಳಿಸಬೇಕು‘ ಎಂದು ಹೇಳಿದರು.
ಬಜಾಜ್ ಫೈನಾನ್ಸ್‌ನ ಅಧಿಕಾರಿ ವೆಂಕಟೇಶ ಮಾತನಾಡಿ, ‘ದೇಶದಾದ್ಯಂತ ನಿತ್ಯ ಏಳು ಸಾವಿರ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ರಿಕವರಿ ಪ್ರಮಾಣ ಕಡಿಮೆ ಇದೆ. ಹೀಗಾಗಿ ಗ್ರಾಹಕರ ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ತಿಳಿಸಿದರು.
‘ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಬಜಾಜ್ ಕಂಪನಿ ರಾಜ್ಯದಲ್ಲಿ 100 ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಮೊದಲ ದಿನ ರಾಯಚೂರು ಹಾಗೂ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆದಿದೆ. ಹಂತ ಹಂತವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.
ಸಾಮಾನ್ಯ ಆರ್ಥಿಕ ವಂಚನೆಗಳ ವಿರುದ್ಧ ಜಾಗೃತಿ ಉದ್ಯೋಗಿಗಳಂತೆ ನಟಿಸುವವರ ಬಗ್ಗೆ ಎಚ್ಚರ ಆರ್‌ಬಿಐ ನಿರ್ದೇಶನದಂತೆ ಜಾಗೃತಿ ಅಭಿಯಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.