ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ 31ರಂದು ಸೈಕಲ್ ಸವಾರಿ: ಧರಣಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 16:05 IST
Last Updated 21 ಜನವರಿ 2024, 16:05 IST
ವೆಂಕಟೇಶ ನಾಯಕ
ವೆಂಕಟೇಶ ನಾಯಕ   

ರಾಯಚೂರು: ಕೊಪ್ಪಳ ಜಿಲ್ಲೆಯ ಗಂಗಾವತಿಯ ಕುಮ್ಮಟದುರ್ಗ ಪ್ರದೇಶವನ್ನು ಕಿಷ್ಕಿಂಧಾ ಪ್ರಾಧಿಕಾರ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಜನವರಿ 31 ರಂದು ನಗರದ ವಾಲ್ಮೀಕಿ ವೃತ್ತದ ಬಳಿ ಧರಣಿ ನಡೆಸಲಾಗುವುದು ಎಂದು ಅಬಕಾರಿ ಇಲಾಖೆ ಸಿಂಧನೂರು ವಲಯದ ವಾಹನ ಚಾಲಕ ವೆಂಕಟೇಶ ನಾಯಕ ತಿಳಿಸಿದರು.

ಸೈಕಲ್ ಸವಾರಿ ಮಾಡಿ ಸರ್ಕಾರಿ ಸೇವೆಗೆ ಸೇರಿದ್ದೆ, ಜನವರಿ 31 ರಂದು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಂಧನೂರಿನ‌ ಅಬಕಾರಿ ಕಚೇರಿಯಿಂದ ರಾಯಚೂರಿನ ವಾಲ್ಮೀಕಿ ವೃತ್ತದವರೆಗೆ ಸೈಕಲ್ ಸವಾರಿ ಮಾಡಿ ಧರಣಿ ಕುಳಿತು ಸಮಾಜದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ರಾಯಚೂರು ಜಿಲ್ಲೆಯ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ವಾಲ್ಮೀಕಿ ಸಮಾಜದಿಂದ ಬಾಲಕ, ಬಾಲಕಿಯರಿಗೆ ವಸತಿ ಶಾಲೆ, ಕಾಲೇಜು ಮತ್ತು ವಿದ್ಯಾರ್ಥಿ ನಿಲಯ ಪ್ರಾರಂಭಿಸಬೇಕು. ರಾಜ್ಯ ಮಟ್ಟದಲ್ಲಿ ಸಮಾಜದ ಪರ ಧ್ವನಿ ಎತ್ತಲು ಪಕ್ಷಾತೀತವಾಗಿ ಒಬ್ಬ ನಾಯಕನನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ತಳವಾರ, ಪರಿವಾರ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವುದನ್ನು ತಡೆಯಲು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ  ಸರ್ಕಾರ ಕೇಂದ್ರೀಯ ಸಮಿತಿ ರಚನೆ ಮಾಡಬೇಕು. ರಾಜ್ಯದ ಪ್ರತಿ ಜಿಲ್ಲೆಗೆ ಒಬ್ಬ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು ನೇಮಕ ಮಾಡಲು ಸಮಾಜದ ಜನಪ್ರತಿನಿಧಿಗಳು, ಹಿರಿಯ ನಾಯಕರು ಆಲೋಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಲಾಗುವುದು.‌ ಸಮಾಜದ ನಾಯಕರಾದ ಶ್ರೀರಾಮುಲು, ಬಿ.ವಿ.ನಾಯಕ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಬಸವನಗೌಡ ತುರುವಿಹಾಳ, ಕರೆಮ್ಮ ನಾಯಕ, ರಾಜೂಗೌಡ, ಶಿವನಗೌಡ ನಾಯಕ ಮತ್ತಿತರರು ಧರಣಿ ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸಲು ಭರವಸೆ ನೀಡಿದರೆ ಹೋರಾಟ ಕೈ ಬಿಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.