ADVERTISEMENT

ರಾಯಚೂರು| ಎನ್ಆರ್ ಸಿ, ಎನ್ ಪಿಆರ್, ಸಿಎಎ ಕಾಯ್ದೆ ಹಿಂಪಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 14:26 IST
Last Updated 20 ಜನವರಿ 2020, 14:26 IST
ರಾಯಚೂರಿನ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು
ರಾಯಚೂರಿನ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು   

ರಾಯಚೂರು: ದೇಶದ ಜ್ವಲಂತ ಸಮಸ್ಯೆಗಳನ್ನು ಮರೆ ಮಾಚಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎನ್ಆರ್ ಸಿ, ಎನ್ ಪಿಆರ್ ಮತ್ತು ಸಿಎಎ ಕಾಯ್ದೆಗಳು ಜಾರಿಗೆ ತಂದಿದ್ದು, ಕೂಡಲೇ ಈ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಹಿಂಜರಿಕೆ, ಮಹಿಳೆಯರ ಮೇಲಿನ ಅತ್ಯಾಚಾರ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲಗೊಂಡಿದ್ದು, ಜನರ ಗಮನ ಬೇರೆಡೆ ಸೆಳೆಯಲು ಈ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಒಂದು ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸುವುದು ಸಲ್ಲದು. ಈ ದೇಶದಲ್ಲಿ ಎಲ್ಲಾ ಧರ್ಮದವರು ಜೀವಿಸುವ ಅವಕಾಶವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರಸ್ತಾಪಿಸಿದ್ದಾರೆ. ಸರ್ಕಾರ ಸಮಾಜದ ಎಲ್ಲರಿಗೂ ಒಳಿತಾಗುವ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದು ಒಳ್ಳೆಯದು ಎಂದರು.

ಈ ಕಾಯ್ದೆಗಳಿಂದ ಲಕ್ಷಾಂತರ ಹಿಂದೂಗಳಿಗೆ ತೊಂದರೆಯಾಗಲಿದೆ. ದೇಶದಲ್ಲಿರುವ ದಲಿತ ಸಮುದಾಯದ ಶೇ.80 ರಷ್ಟು ಮಂದಿಗೆ ದಾಖಲೆಗಳೇ ಇಲ್ಲ. ಅನಾಥರು, ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗಳು, ಬಡವರು ಸೇರಿದಂತೆ ಎಲ್ಲಾ ವರ್ಗದಲ್ಲಿ ದಾಖಲೆ ಇಲ್ಲದವರು ಅನೇಕರು ಇದ್ದಾರೆ. ಅವರೆಲ್ಲ ಈ ದೇಶದ ನಾಗರಿಕ ಎಂದು ದಾಖಲೆಗಳ ಮೂಲಕ ಸಾಬೀತು ಪಡಿಸುವುದು ಅಸಾಧ್ಯ ಎಂದರು.

ಕೇಂದ್ರ ಸರ್ಕಾರವು ಕೂಡಲೇ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಚ್.ರಂಗಪ್ಪ ಹೆಗಡೆ, ಮಂಜುನಾಥ, ಎಂ.ಬಿ.ಮಾರೇಪ್ಪ, ಶರಣಪ್ಪ ಸೇರಿದಂತೆ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.