ADVERTISEMENT

ಸಿಂಧನೂರು | ‘22 ರಂದುಅಂಬಾದೇವಿಗೆ ತುಂಗಾ ಆರತಿ’

ಅಂಬಾಮಠ, ಗಾಂಧಿನಗರ: ದಸರಾ ಉತ್ಸವದ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 6:30 IST
Last Updated 8 ಸೆಪ್ಟೆಂಬರ್ 2025, 6:30 IST
ಸಿಂಧನೂರು ತಾಲ್ಲೂಕಿನ ಅಂಬಾಮಠ ಗ್ರಾಮದಲ್ಲಿ ದಸರಾ ಉತ್ಸವ ಅಂಗವಾಗಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು
ಸಿಂಧನೂರು ತಾಲ್ಲೂಕಿನ ಅಂಬಾಮಠ ಗ್ರಾಮದಲ್ಲಿ ದಸರಾ ಉತ್ಸವ ಅಂಗವಾಗಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು   

ಸಿಂಧನೂರು: ಸಾಲಗುಂದಾ, ಮುಕ್ಕುಂದಾ, ದಢೇಸುಗೂರು, ಸೋಮಲಾಪುರ, ರೌಡಕುಂದಾ, ಚನ್ನಳ್ಳಿ, ಗೊರೇಬಾಳ, ಹೊಸಳ್ಳಿ ಇ.ಜೆ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡು ಅಂಬಾಮಠದಲ್ಲಿ ಹಾಗೂ ಜಾಲಿಹಾಳ, ಕೆ.ಬಸಾಪೂರ, ಕೆ.ಹೊಸಳ್ಳಿ, ಸತ್ಯನಾರಾಯಣ ಕ್ಯಾಂಪ್ ಗ್ರಾ.ಪಂ ಒಳಗೊಂಡು ಗಾಂಧಿನಗರ ಗ್ರಾಮದಲ್ಲಿ ದಸರಾ ಉತ್ಸವ ಅಂಗವಾಗಿ ಭಾನುವಾರ ಪೂರ್ವಭಾವಿ ಸಭೆಗಳು ನಡೆದವು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ, ‘ಈ ಬಾರಿ ಸೆ.22 ರಂದು ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಯಲ್ಲಿದ್ದ ಮುಕ್ಕುಂದಾ ಗ್ರಾಮದ ತುಂಗಭದ್ರಾ ನದಿಯ ತಟದಲ್ಲಿ ವಾರಣಾಸಿ ಮಾದರಿಯಲ್ಲಿ ನೂರಾರು ಪುರೋಹಿತರಿಂದ ಅಂಬಾದೇವಿಗೆ ತುಂಗಾ ಆರತಿ ಮಾಡುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುವುದು. ವಿವಿಧ ಕಲಾ ತಂಡಗಳು ಹಾಗೂ ಕುಂಭ, ಕಳಸಗಳೊಂದಿಗೆ ಅದ್ದೂರಿ ಮೆರವಣಿಗೆಯೂ ನಡೆಯಲಿದೆ’ ಎಂದರು.

‌ಸೆ.23 ರಂದು ಅಂಬಾಮಠ ಗ್ರಾಮದಲ್ಲಿ ಗ್ರಾಮೀಣ ದಸರಾ ಮತ್ತು ಕ್ಲಸ್ಟರ್ ಮಟ್ಟದ ವಿವಿಧ ಕ್ರೀಡಾಕೂಟಕ್ಕೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶಿವರಾಜ ಎಸ್.ತಂಗಡಗಿ ಚಾಲನೆ ನೀಡಲಿದ್ದಾರೆ. 24ರಂದು ಆರ್.ಎಚ್.ನಂ.2 ಕ್ಯಾಂಪ್, 25 ರಂದು ಗಾಂಧಿನಗರ, 26 ರಂದು ರಾಗಲಪರ್ವಿ, 27 ರಂದು ಪಗಡದಿನ್ನಿ ಗ್ರಾಮದಲ್ಲಿ ಗ್ರಾಮೀಣ ದಸರಾ ಉತ್ಸವ ಕಾರ್ಯಕ್ರಮಗಳನ್ನು ತಲಾ ಐದೊಂದು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡು ಆಯೋಜಿಸಲಾಗಿದೆ ಎಂದು ವಿವರಿಸಿದರು.

ADVERTISEMENT

ಸೆ.27 ರಂದು ಸಿಂಧನೂರು ನಗರದಲ್ಲಿ ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಅ.2 ರವರೆಗೆ ಪ್ರತಿನಿತ್ಯ ವಿವಿಧ ಕ್ರೀಡೆಗಳು, ಸಂಜೆ ವೇದಿಕೆ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸ್ಥಳೀಯ ಸೇರಿ ರಾಜ್ಯ ಮಟ್ಟದ ಕಲಾ ತಂಡಗಳು ಬರಲಿವೆ. ವಿಶೇಷವಾಗಿ ಜೀ ಕನ್ನಡ ಖ್ಯಾತಿಯ ಅನೇಕ ಕಲಾವಿದರನ್ನು ಕರೆಯಿಸಿ ಮನೋರಂಜನಾ ಕಾರ್ಯಕ್ರಮ ಏರ್ಪಡಿಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಆಗಬೇಕಾದರೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಸಂಘ-ಸಂಸ್ಥೆಗಳ ಸೇರಿದಂತೆ ಸಾರ್ವಜನಿಕರ ಸಹಕಾರ ಮತ್ತು ಸಹಭಾಗಿತ್ವ ಅತ್ಯವಶ್ಯಕ. ಹೀಗಾಗಿ ಎಲ್ಲರೂ ಸಮನ್ವತೆಯಿಂದ ಕೆಲಸ ಮಾಡಬೇಕು ಎಂದರು.

ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಡಿವೈಎಸ್‍ಪಿ ಬಿ.ಎಸ್.ತಳವಾರ, ಸರ್ಕಲ್ ಇನ್ಸ್‍ಪೆಕ್ಟರ್ ವೀರಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಜೆಸ್ಕಾಂ ಎಇಇ ಶ್ರೀನಿವಾಸ, ಸಿಡಿಪಿಓ ಲಿಂಗನಗೌಡ, ಮುಖಂಡರಾದ ಎಂ.ಕಾಳಿಂಗಪ್ಪ ವಕೀಲ, ಲಿಂಗರಾಜ ಪಾಟೀಲ್ ಹಂಚಿನಾಳ, ಎಂ.ಲಿಂಗಪ್ಪ ದಢೇಸುಗೂರು, ಅಶೋಕ ಉಮಲೂಟಿ, ಬಸವರಾಜ ಹಿರೇಗೌಡರ್, ಎಸ್.ದೇವೇಂದ್ರಗೌಡ, ಆರ್.ಸಿ.ಪಾಟೀಲ್, ಎನ್.ಅಮರೇಶ ಉಪಸ್ಥಿತರಿದ್ದರು.

ಸಿಂಧನೂರು ತಾಲ್ಲೂಕಿನ ಅಂಬಾಮಠ ಗ್ರಾಮದಲ್ಲಿ ದಸರಾ ಉತ್ಸವ ಅಂಗವಾಗಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರಾ.ಪಂ ಸದಸ್ಯರು ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿರುವುದು
ಸಿಂಧನೂರು ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ದಸರಾ ಉತ್ಸವ ಅಂಗವಾಗಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು

ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಜೀ ಕನ್ನಡದ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.