ಸಿಂಧನೂರು: ‘ದುಷ್ಟಶಕ್ತಿಯ ಸಂಹಾರ ಮತ್ತು ಶಿಷ್ಟಶಕ್ತಿಯ ಜಯಭೇರಿಯೇ ದಸರಾ ಹಬ್ಬ. ಭಕ್ತಿ-ಭಾವದಿಂದ ಈ ಹಬ್ಬವನ್ನು ಆಚರಿಸುವುದು ನಮ್ಮ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯಾಗಿದೆ’ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಶ್ರೀಕ್ಷೇತ್ರ ಸಿದ್ಧಪರ್ವತ ಅಂಬಾಮಠದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ದಸರಾ, ಅಂಬಾದೇವಿ ನವರಾತ್ರಿ ದಸರಾ ಉತ್ಸವ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ಮೈಸೂರು ದಸರಾ ಮಾದರಿಯಲ್ಲಿ ಪಕ್ಷಾತೀತವಾಗಿ ಎಲ್ಲರನ್ನೂ ಒಳಗೊಂಡು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರ ಜಾಗೃತಿಯ ಮೂಲಕ ಸಿಂಧನೂರು ತಾಲ್ಲೂಕಿನಲ್ಲಿ ದಸರಾ ಉತ್ಸವ ಆಚರಣೆಗೆ ಮುಂದಾಗಿರುವ ಶಾಸಕ ಹಂಪನಗೌಡ ಬಾದರ್ಲಿ ಅವರ ಕಾರ್ಯ ಸ್ತುತ್ಯಾರ್ಹ’ ಎಂದರು.
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ,‘ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರ, ಮಾನವೀಯ ಮೌಲ್ಯಗಳೇ ನಮ್ಮನ್ನು ಕಾಪಾಡುತ್ತಿವೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ,‘ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರ, ಕ್ರಿಮಿನಾಶಕ ಸಿಂಪಡಣೆಯಿಂದ ತಿನ್ನುವ ಆಹಾರ ವಿಷವಾಗುತ್ತಿದೆ. ಭೂಮಿ ಫಲವತ್ತತೆ ಕಳೆದುಕೊಂಡು ಸೊರಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ,‘ದೇಶದ 18 ಶಕ್ತಿ ಪೀಠಗಳಲ್ಲಿ ಒಂದಾಗಿರುವ ಅಂಬಾಮಠದ ಅಂಬಾದೇವಿ ದೇವಸ್ಥಾನ 400 ವರ್ಷಗಳ ಇತಿಹಾಸ ಹೊಂದಿದೆ’ ಎಂದರು.
ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಸೋಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ ಹುಸೇನಪ್ಪ, ಸಾಲಗುಂದಾ ಗ್ರಾ.ಪಂ ಅಧ್ಯಕ್ಷೆ ಶರಣಮ್ಮ, ರೌಡಕುದಾ ಗ್ರಾ.ಪಂ. ಅಧ್ಯಕ್ಷೆ ಅನ್ನಪೂರ್ಣಮ್ಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಉಪಸ್ಥಿತರಿದ್ದರು.
ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಸ್ವಾಗತಿಸಿದರು. ಗಾಯಕಿ ಶಿವಾನಿ ಪ್ರಾರ್ಥನೆ ಗೀತೆ ಹಾಡಿದರು. ವೀರೇಶ ಸಾಲಿಮಠ ರೈತಗೀತೆ ಹಾಡಿದರು. ಶಿಕ್ಷಕ ಬಸವರಾಜ ಅಂಗಡಿ ನಿರೂಪಿಸಿದರು.
ಮೈಸೂರು ಹೊರತುಪಡಿಸಿದರೆ ಸಿಂಧನೂರಿನಲ್ಲಿಯೇ ದಸರಾ ಉತ್ಸವ ನಡೆಯುತ್ತಿರುವುದು ವಿಶೇಷವಾಗಿದೆ.– ಶರಣಬಸಪ್ಪ ದರ್ಶನಾಪುರ, ಸಣ್ಣ ಕೈಗಾರಿಕಾ ಸಚಿವ
ಅದ್ಧೂರಿ ಮೆರವಣಿಗೆ
ಹುಡಾ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಯ ಬಳಿ ಅಂಬಾದೇವಿ ಮೂರ್ತಿಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಅಂಬಾದೇವಿ ದೇವಸ್ಥಾನದ ನೂತನ ಶಿಲಾಮಂಟಪದ ಸ್ತಬ್ದಚಿತ್ರ ಆಕರ್ಷಕ ವಾಗಿತ್ತು. ನೂರಾರು ಮಹಿಳೆಯರು ಕುಂಭ-ಕಳಸ ಹೊತ್ತು ಸಾಗಿದರು. ಗೊಂಬೆ ಕುಣಿತ ಲಂಬಾಣಿ ನೃತ್ಯ ವೀರಗಾಸೆ ಡೊಳ್ಳು ಕುಣಿತ ಬಾಜಾ-ಭಜಂತ್ರಿಗಳ ವಾದ್ಯ ಮೇಳ ಮೆರವಣಿಗೆಗೆ ಮೆರುಗು ತಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.