ADVERTISEMENT

ಕೆರೆ ಹೂಳು ಎತ್ತುವ ಕೆಲಸ ಮುಂದೂಡಿಕೆ

ಜಿಲ್ಲಾಧಿಕಾರಿಯಿಂದ ಜಲಸಂವರ್ಧನೆ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 14:36 IST
Last Updated 1 ಆಗಸ್ಟ್ 2019, 14:36 IST
ರಾಯಚೂರು ಜಿಲ್ಲಾಧಿಕಾರಿ ಬಿ.ಶರತ್‌ ಅವರ ಅಧ್ಯಕ್ಷತೆಯಲ್ಲಿ ಜಲಸಂವರ್ಧನ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಗುರುವಾರ ನಡೆಯಿತು
ರಾಯಚೂರು ಜಿಲ್ಲಾಧಿಕಾರಿ ಬಿ.ಶರತ್‌ ಅವರ ಅಧ್ಯಕ್ಷತೆಯಲ್ಲಿ ಜಲಸಂವರ್ಧನ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಗುರುವಾರ ನಡೆಯಿತು   

ರಾಯಚೂರು: ಜಿಲ್ಲೆಯಲ್ಲಿ ಸದ್ಯ ಮಳೆ ಬೀಳುತ್ತಿರುವುದರಿಂದ ಕೆರೆ ಹೂಳೆತ್ತುವ ಕೆಲಸವನ್ನು ಡಿಸೆಂಬರ್‌ನಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಭಾರತೀಯ ಜೈನ್‌ ಸಂಘಟನೆ (ಬಿಜೆಎಸ್‌) ಸಹಯೋಗದಲ್ಲಿ ಕೈಗೊಂಡ ಕೆರೆ ಹೂಳೆತ್ತುವ ‘ಜಲಸಂವರ್ಧನೆ ಯೋಜನೆ’ಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ 18 ಕೆರೆಗಳಲ್ಲಿ ಹೂಳೆತ್ತುವ ಕೆಲಸ ಆರಂಭಿಸಿ, 84 ಸಾವಿರ ಕ್ಯುಬಿಕ್‌ ಮೀಟರ್‌ ಹೂಳನ್ನು ತೆಗೆಯಲಾಗಿದೆ. ಸದ್ಯಕ್ಕೆ ಕೆಲಸ ಸ್ಥಗಿತಗೊಳಿಸುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.

ADVERTISEMENT

ಕಳೆದ ವರ್ಷ ರಾಯಚೂರು ತಾಲ್ಲೂಕಿನ ಕಟ್ಲೆಟ್ಕೂರು ಗ್ರಾಮದಲ್ಲಿ ಭಾರತೀಯ ಜೈನ್‌ ಸಂಘಟನೆಯಿಂದ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆನಂತರ ರಾಯಚೂರು ತಾಲ್ಲೂಕಿನಲ್ಲಿ ಐದು, ಲಿಂಗಸುಗೂರು ತಾಲ್ಲೂಕಿನಲ್ಲಿ ಐದು, ದೇವದುರ್ಗ ತಾಲ್ಲೂಕಿನಲ್ಲಿ ಮೂರು, ಮಾನ್ವಿ ತಾಲ್ಲೂಕಿನಲ್ಲಿ ಮೂರು, ಮಸ್ಕಿ ಮತ್ತು ಸಿಂಧನೂರು ತಾಲ್ಲೂಕುಗಳಲ್ಲಿ ತಲಾ ಒಂದು ಕೆರೆಯಲ್ಲಿ ಹೂಳೆತ್ತಲಾಗಿದೆ. ಸಂಘಟನೆಯಿಂದ ಎಲ್ಲವನ್ನು ಕ್ರೋಢೀಕರಣ ಮಾಡಿಕೊಂಡು ಕೆಲಸ ಮಾಡಿಸಿದ್ದಾರೆ. ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

ಬಿಜೆಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕಮಲಕುಮಾರ್‌ ಜೈನ್‌ ಮಾತನಾಡಿ, ದೇಶದಲ್ಲಿ ಇನ್ನಷ್ಟು ರಾಜ್ಯಗಳಲ್ಲಿ ಕೆರೆ ಹೂಳೆತ್ತುವ ಯೋಜನೆ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಸಂಘಟನೆಯ ಸಂಸ್ಥಾಪಕ ಶಾಂತಿಲಾಲ್‌ ಮೂತಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೆಲವು ಸಚಿವರನ್ನು ಭೇಟಿ ಮಾಡಿದ್ದಾರೆ. ಈ ಕಾರ್ಯಕ್ಕೆ ಸಹಕಾರ ನೀಡುವಂತೆ ಕೋರಿದ್ದಾರೆ ಎಂದು ತಿಳಿಸಿದರು.

ಪ್ರೊಬೇಷನರಿ ಅಧಿಕಾರಿ ಯುಕೇಶಕುಮಾರ್‌, ಕೃಷಿ ಅಧಿಕಾರಿ ಚೇತನ ಪಾಟೀಲ, ಜಯಪ್ರಕಾಶ, ಮಹಾಂತೇಶ ಹವಾಲ್ದಾರ್‌, ಸಂದೀಪ್‌ ಇದ್ದರು.

ನದಿತೀರದಲ್ಲಿ ನಿಗಾ:ನಾರಾಯಣಪುರ ಜಲಾಶಯದಿಂದ ಹೊರಹರಿವು ಹೆಚ್ಚಳ ಮಾಡಿರುವುದರಿಂದ ಲಿಂಗಸುಗೂರು ತಾಲ್ಲೂಕಿನ ನದಿತೀರ ಪ್ರದೇಶಗಳು ಮತ್ತು ನಡುಗಡ್ಡೆ ಜನರ ರಕ್ಷಣೆಗಾಗಿ ಮುಂಜಾಗ್ರತೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇದೇ ವೇಳೆ ಸುದ್ದಿಗಾರರಿಗೆ ತಿಳಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಪೊಲೀಸ್‌ ಇಲಾಖೆ ಮತ್ತು ನೀರಾವರಿ ಇಲಾಖೆಯವರು ಸಹಕಾರ ನೀಡಿದ್ದು, ನಡುಗಡ್ಡೆ ಜನರಿಗೆ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗಿದೆ. ಈ ಕಾರ್ಯಕ್ಕಾಗಿ ತಂಡಗಳನ್ನು ರಚಿಸಲಾಗಿದೆ ಎಂದರು.

ದಿನದ 24 ಗಂಟೆಯೂ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳುವುದಕ್ಕೆ ತಂಡವು ಸನ್ನದ್ಧವಾಗಿದೆ. ಕೆಲವು ಕಡೆಗಳಲ್ಲಿ ಬೋಟ್‌ ವ್ಯವಸ್ಥೆ ಮಾಡಲಾಗಿದೆ. ಇನ್ನಷ್ಟು ಬೋಟ್‌ಗಳನ್ನು ಪಡೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಬಳಿ ನದಿಪ್ರವಾಹ ಹೆಚ್ಚಾಗಿರುವುದರಿಂದ ವಾಹನಗಳ ಸಂಚಾರವನ್ನು ಸ್ಥಗಿರ ಮಾಡಲಾಗಿದೆ. ನದಿತೀರದಲ್ಲಿ ಪ್ರವಾಹ ಸುತ್ತುವರಿದ ದೇವಸ್ಥಾನಗಳಿಗೆ ಜನರು ಹೋಗದಂತೆ ಸೂಚಿಸಲಾಗಿದೆ. ಪ್ರವಾಹ ಪರಿಸ್ಥಿತಿ ಸದ್ಯ ಹಾಗೇ ಮುಂದುವರಿದಿದೆ. ನದಿಗೆ ಹರಿದುಬರುವ ನೀರು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿ ನಿಭಾಯಿಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.