ADVERTISEMENT

ವಿಭಿನ್ನ ಯೋಜನೆ ರೂಪಿಸಲು ಜಿಲ್ಲಾಧಿಕಾರಿ ಸಲಹೆ

ಮಹತ್ವಾಕಾಂಕ್ಷಿ ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ರೂಪಿಸಲು ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 14:24 IST
Last Updated 15 ಜುಲೈ 2019, 14:24 IST
ರಾಯಚೂರಿನಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಮಾತನಾಡಿದರು
ರಾಯಚೂರಿನಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಶರತ್ ಮಾತನಾಡಿದರು   

ರಾಯಚೂರು: ನೀತಿ ಆಯೋಗದ ಟ್ರಾನ್ಸ್‌ಫಾರ್ಮಿಂಗ್‌ ಇಂಡಿಯಾ ಮಹತ್ವಕಾಂಕ್ಷಿ (ಆಸ್ಪಿರೇಷನಲ್‌) ಜಿಲ್ಲೆಯಾಗಿ ರಾಯಚೂರು ಆಯ್ಕೆಯಾಗಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗುವಂತಹ ಒಳ್ಳೆಯ ಯೋಜನೆಗಳನ್ನು ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದರು.

ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನೀತಿ ಆಯೋಗದ ಟ್ರಾನ್ಸ್‌ಫಾರ್ಮಿಂಗ್‌ ಇಂಡಿಯಾ ಆಸ್ಪಿರೇಷನಲ್‌ ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಲು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಯೋಜನೆ ರೂಪಿಸುವಾಗ ಅಧಿಕಾರಿಗಳು ಹಿಂದೆ ಏನು ಮಾಡಲಾಗಿತ್ತು. ಈಗ ಏನಾಗಿದೆ ಹಾಗೂ ಮುಂದೆ ಏನೆಲ್ಲಾ ಮಾಡಬೇಕು ಎಂಬ ಮುಂದಾಲೋಚನೆ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ರೂಪಿಸಬೇಕು. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಜಿಲ್ಲೆಯ ಸಮಗ್ರ ಪ್ರಗತಿಗೆ ಶ್ರಮ ವಹಿಸಬೇಕು ಎಂದರು.

ADVERTISEMENT

ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಕೈಗಾರಿಕೆ ಸೇರಿದಂತೆ ಇತರೆ ಆದ್ಯತಾ ವಲಯಗಳಿಗೆ ಒತ್ತು ನೀಡಿ, ಅಭಿವೃದ್ಧಿಗಾಗಿ ಆಯಾ ಇಲಾಖೆ ವ್ಯಾಪ್ತಿಯಲ್ಲಿ ಪೂರಕವಾಗುವ ಯೋಜನೆಗಳನ್ನು ರೂಪಿಸಬೇಕು ಎಂದು ನಿರ್ದೇಶನ ನೀಡಿದರು.

ಆದ್ಯತಾ ವಲಯಗಳಲ್ಲಿ ಮಾನವ ಸಂಪನ್ಮೂಲವನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂಬುದು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ಮಾಡಬೇಕು. ಜೊತೆಗೆ ಯೋಜನೆಗಳು ವಿಭಿನ್ನತೆಯನ್ನು ಹೊಂದಿರಬೇಕು ಎಂದರು.

ಹಿಂದುಳಿದ ಜಿಲ್ಲೆಗಳಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ವಿಶೇಷ ಒತ್ತು ನೀಡುವುದರಿಂದ ಸಿಕ್ಕಿರುವ ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬೇಕು. ಆದ್ದರಿಂದ ಆದ್ಯತಾ ವಲಯಗಳ ಸಮಗ್ರ ಮಾಹಿತಿ ಕಲೆಹಾಕಿ ಮುಂದುವರೆಯಬೇಕು. ಕೇವಲ ಮೂಲ ಸೌಕರ್ಯಕ್ಕೆ ಒತ್ತು ನೀಡದೇ ವಿಭಿನ್ನ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಜಿಲ್ಲೆಯ ಅಭಿವೃದ್ಧಿ ಇಲಾಖಾ ಅಧಿಕಾರಿಗಳ ಕೈಯಲ್ಲಿದೆ. ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಂಡು ಜಿಲ್ಲೆಯಲ್ಲಿ ಬದಲಾವಣೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಉಪವಿಭಾಗ ಅಧಿಕಾರಿ ಶಿಲ್ಪಾಶರ್ಮಾ, ಪ್ರೋಬೇಷನರಿ ಐಎಎಸ್ ಅಧಿಕಾರಿ ರಿತೇಶ್ ಕುಮಾರ, ಮುಖ್ಯ ಯೋಜನಾಧಿಕಾರಿ ಟಿ.ರೋಣಿ, ಶಿಕ್ಷಣಾಧಿಕಾರಿ ಆರ್.ಇಂದಿರಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಎಂ.ಕೆ.ಎಸ್.ನಸೀರ್, ಡಾ.ಸುರೇಂದ್ರ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.