ADVERTISEMENT

ಕೊರೊನಾ ಸೋಂಕು ನಿಯಂತ್ರಣ ಕ್ರಮ ತೃಪ್ತಿಕರವಾಗಿಲ್ಲ

ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 13:12 IST
Last Updated 17 ಮೇ 2021, 13:12 IST
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೋಮವಾರ ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಐಸೋಲೇಷನ್ ವಾರ್ಡ್ ಹಾಗೂ ಸೌಲಭ್ಯಗಳ ಪರಿಶೀಲನೆ ನಡೆಸಿದರು
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೋಮವಾರ ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಐಸೋಲೇಷನ್ ವಾರ್ಡ್ ಹಾಗೂ ಸೌಲಭ್ಯಗಳ ಪರಿಶೀಲನೆ ನಡೆಸಿದರು   

ಲಿಂಗಸುಗೂರು:‘ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿಮಾತನಾಡಿದರು.

‘ಕಳೆದ ವರ್ಷ ಎಷ್ಷೆಲ್ಲಾ ಎಚ್ಚರಿಕೆ ಕ್ರಮಗಳನ್ನು ಕೈಗೊಂಡು ತಾಲ್ಲೂಕಿನಲ್ಲಿ ಸೋಂಕು ಹರಡಲು ಕಡಿವಾಣ ಹಾಕಲಾಗಿತ್ತು. ಎರಡನೇ ಅಲೆ ನಿಯಂತ್ರಿಸುವಲ್ಲಿ ಕಿಂಚಿತ್ತು ಕೆಲಸ ಮಾಡಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‍ ಸೋಂಕು ತಾಂಡವವಾಡುತ್ತಿದೆ. ಅಲ್ಲಿನ ಸೋಂಕಿತರನ್ನು ಕೋವಿಡ್‍ ಕೇರ್‌ಗೆ ಸ್ಥಳಾಂತರಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಕೋವಿಡ್‍ ಸೋಂಕಿತರ ಸಂಖ್ಯೆ 441 ಎಂದು ನೀವೇ ಹೇಳುತ್ತಿದ್ದೀರಿ. ಆದರೆ, ಕೋವಿಡ್‍ ಕೇರ್‌ ಕೇಂದ್ರದಲ್ಲಿ ಕೇವಲ 27 ಜನರಿದ್ದಾರೆ. ಉಳಿದವರು ಎಲ್ಲಿಗೆ ಹೋಗಿದ್ದಾರೆ. ಗ್ರಾಮೀಣ ಜನರ ಮನೆಯಲ್ಲಿ ಸರ್ಕಾರಿ ನಿಯಮಾನುಸಾರ ಹೋಂ ಐಸೋಲೇಷನ್‍ ಇರಲು ಸಾಧ‍್ಯತೆಗಳ ಪರಿಶೀಲನೆ ಮಾಡಿಲ್ಲ. ಬಹುತೇಕ ಸೋಂಕಿತರು ಸಾರ್ವಜನಿಕವಾಗಿ ತಿರುಗಾಟ ನಡೆಸುತ್ತಿದ್ದಾರೆ. ಹೀಗಾಗಿಯೆ ಸೋಂಕು ನಿಯಂತ್ರಣವು ಸವಾಲಾಗಿ ಪರಿಣಮಿಸಿದೆ’ ಎಂದರು.

‘ರೋಗದ ಲಕ್ಷಣಗಳಿಲ್ಲದ, ಸೌಮ್ಯ ಲಕ್ಷಣಗಳುಳ್ಳ ರೋಗಿಗಳನ್ನು ಪ್ರತ್ಯೇಕಿಸಿ ಕೋವಿಡ್‍ ಕೇರ್ಕೇಂದ್ರ ಅಥವಾ ಪ್ರತ್ಯೇಕ ಹೊಟೆಲ್‍ ಅಥವಾ ಲಾಡ್ಜ್‌ಗಳಲ್ಲಿ ಇರಿಸಲು ಕ್ರಮ ಕೈಗೊಳ್ಳಿ. ಕೋವಿಡ್‍ ಕೇರ್‍ ಕೇಂದ್ರಗಳ ಬಳಿ ತುರ್ತು ಚಿಕಿತ್ಸೆಗೆಂದು ಆಮ್ಲಜನಕ ಜೋಡಣೆ ಮಾಡಿದ ಸಾರಿಗೆ ಸಂಸ್ಥೆ ಬಸ್‍ಗಳ ವ್ಯವಸ್ಥೆ ಮಾಡಿಕೊಳ್ಳಲಿ. ತುರ್ತು ಸಂದರ್ಭದಲ್ಲಿ ರೋಗಿಗಳ ರಕ್ಷಣೆಗೆ ಸಹಾಯ ಆಗಲಿದೆ. ಸಾರಿಗೆ ಅಧಿಕಾರಿಗಳಿಗೆ ಬಸ್‍ ವ್ಯವಸ್ಥೆ ಮಾಡಲು ಸೂಚಿಸಲಾಗುವುದು’ ಎಂದು ತಿಳಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಿಎಸ್‍ ಹೂಲಗೇರಿ ಮಾತನಾಡಿ, ‘ಗ್ರಾಮೀಣ ಪ್ರದೇಶಗಳಲ್ಲಿನ ಸೋಂಕಿತರಿಗೆ ಕಾಳಜಿ ಮಾಡುವವರೆ ಇಲ್ಲವಾಗಿದೆ. ಆಸ್ಪತ್ರೆಗೆ ಬರದೆ ಮೃತಪಟ್ಟವರ ಸಂಖ್ಯೆ ಹೆಚ್ಚಳವಾಗಿದೆ. ತಾಲ್ಲೂಕು ಆಡಳಿತ ವ್ಯವಸ್ಥಿತವಾಗಿ ಕೆಲಸ ಮಾಡಲು ಮುಂದಾಗುತ್ತಿಲ್ಲ. ವೆಂಟಿಲೇಟರ್‍, ಆಕ್ಸಿಜನ್‍, ಅಗತ್ಯ ಔಷಧಿ ಕೊರತೆ ಇದ್ದು ರೋಗಿಗಳು ಪರದಾಡುತ್ತಿದ್ದಾರೆ’ ಎಂದರು.ಹಟ್ಟಿ ಚಿನ್ನದಗಣಿ ಕಂಪೆನಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ ಅವರು ಇದಕ್ಕೆ ಧ್ವನಿಗೂಡಿಸಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ್‍, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್‍ ತನ್ವೀರ್‍ ಆಸಿಫ್‍, ಪೊಲೀಸ್‍ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಕಾಪುರ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ (ಪ್ರಭಾರಿ) ದಿಗಂಬರ ಹೆರೂರ, ತಹಶೀಲ್ದಾರ್‍ ಚಾಮರಾಜ ಪಾಟೀಲ್‍ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.