ರಾಯಚೂರು: ‘ಇತ್ತೀಚೆಗೆ ಪತಿ ಕೌಟುಂಬಿಕ ಕಿರುಕುಳದಿಂದ ಮನನೊಂದ ಗೃಹಿಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಕುಟುಂಬಸ್ಥರನ್ನು ಕೂಡಲೇ ಬಂಧಿಸಬೇಕು’ ಎಂದು ಸಮಾಜ ಸೇವಕ ಮಾರುತಿ ಬಡಿಗೇರ ಒತ್ತಾಯಿಸಿದರು.
‘ಪತಿ ಸುನೀಲ್, ಮಾವ ಸುಭಾಷ್, ಅತ್ತೆ ಉಮಾ ಸೇರಿ 7 ಜನರ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಾರ ಕಳೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.
‘ಈ ಪ್ರಕರಣವನ್ನು ಪೊಲೀಸರು ಮಾರೆಮಾಚಿದ್ದಾರೆ. ಕೂಡಲೇ ಆರೋಪಿಗಳ ವಿರುದ್ಧ 302 ಸೆಕ್ಷನ್ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು’ ಎಂದು ಆಗ್ರಹಿಸಿದರು. ‘ಘಟನೆ ನಡೆದು ಹಲವು ದಿನಗಳು ಕಳೆದರೂ ಯಾಕೆ ಇನ್ನೂ ಬಂಧಿಸಿಲ್ಲ’ ಎಂದು ಪ್ರಶ್ನಿಸಿದರು.
‘ಲಿಂಗಸುಗೂರು ಸಿಪಿಐ ಪುಂಡಲೀಕ ಅವರ ನಿರ್ಲಕ್ಷ್ಯ ಈ ಪ್ರಕರಣದಲ್ಲಿ ಎದ್ದುಕಾಣುತ್ತಿದೆ. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದಶರಥ ಪಂಚಂಗಿ, ಜ್ಯೋತಿ ಪಂಚಂಗಿ, ಸುನೀಲ ಸಿಂಧೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.