ADVERTISEMENT

‘ವಿಜೃಂಭಣೆಯಿಂದ ಸಿಂಧನೂರು ದಸರಾ ಆಚರಿಸಲು ನಿರ್ಧಾರ’

ನಗರಸಭೆಯಲ್ಲಿ ಪೂರ್ವಭಾವಿ ಸಭೆ: ಶಾಸಕ ಹಂಪನಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:50 IST
Last Updated 16 ಆಗಸ್ಟ್ 2025, 7:50 IST
ಸಿಂದನೂರಿನ ನಗರಸಭೆ ಕಚೇರಿ ಸಭಾಂಗಣದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು
ಸಿಂದನೂರಿನ ನಗರಸಭೆ ಕಚೇರಿ ಸಭಾಂಗಣದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು   

ಸಿಂಧನೂರು: ‘ಕಳೆದ ವರ್ಷ ಸಿಂಧನೂರಿನಲ್ಲಿ ದಸರಾವನ್ನು ಮೈಸೂರು ಮಾದರಿಯಲ್ಲಿ ವಿಜೃಂಭಣೆಯಿಂದ ಆಚರಿಸುವ ಮೂಲಕ ರಾಜ್ಯದಲ್ಲಿಯೇ ಮೈಲುಗಲ್ಲು ಸ್ಥಾಪಿಸಲಾಯಿತು. ಅದರಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲು ಸಿದ್ದತೆ ಮಾಡಿಕೊಳ್ಳಬೇಕು’ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರಸಭೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೂರನೇ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ,‘ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರ ಸಹಭಾಗಿತ್ವದಲ್ಲಿ ಸಿದ್ದತಾ ಕಾರ್ಯ ನಡೆಸಬೇಕು’ ಎಂದರು.

ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿ,‘ಸೆ.22ರಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಪತಿಗಳಿಂದ ದಸರಾ ಉತ್ಸವ ಉದ್ಘಾಟನೆಯಾಗಲಿದ್ದು, ಕಳೆದ ವರ್ಷಕ್ಕಿಂತ ಭಿನ್ನವಾಗಿ ಈ ಬಾರಿ ಗ್ರಾಮೀಣ ಪ್ರದೇಶದ ಕಲೆ, ಸಾಹಿತ್ಯ, ಕ್ರೀಡೆಗಳಿಗೆ ಉತ್ತೇಜನೆ ನೀಡುವ ನಿಟ್ಟಿನಲ್ಲಿ ಐದು ಪಂಚಾಯಿತಿ ಒಳಗೊಂಡು ಒಂದು ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಹೇಳಿದರು.

ADVERTISEMENT

‘ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ 25 ಗ್ರಾಮ ಪಂಚಾಯಿತಿಗಳನ್ನು ಒಳಗೊಳ್ಳುವಂತೆ ಐದು ಕಡೆಗಳಲ್ಲಿ ಸಭೆ ಮಾಡಿ ಅಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ರೂಪುರೇಷ ತಯಾರಿಸಲಾಗುವುದು. ಒಟ್ಟಾರೆ ತಾಲ್ಲೂಕಿನ 240 ಜನವಸತಿ ಗ್ರಾಮಗಳಿಗೆ ಹಬ್ಬದ ಸಂದೇಶ ತಲುಪಿಸಬೇಕಾಗಿದೆ’ ಎಂದರು.

‘ಸೆ.29ರಿಂದ ಅಕ್ಟೋಬರ್ 2 ರವರೆಗೆ ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಗ್ರಾಮೀಣ ಮಟ್ಟದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಗುವುದು. ಅ.2ರಂದು ಅಂಬಾರಿಯಲ್ಲಿ ಬಗಳಾಮುಖಿಯ ಮೂರ್ತಿಯ ಮೆರವಣಿಗೆ ನಡೆಸಲಾಗುವುದು’ ಎಂದು ಹೇಳಿದರು.

‘ಕಳೆದ ವರ್ಷ ಆಗಿರುವ ಸಣ್ಣಪುಟ್ಟ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಈ ಬಾರಿ ಇನ್ನೂ ಉತ್ತಮವಾಗಿ ದಸರಾ ಆಚರಿಸಬೇಕಾಗಿದೆ’ ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

‘ದಸರಾ ಉತ್ಸವದಲ್ಲಿ ಎಲ್ಲ ಧರ್ಮೀಯರು ಭಾಗವಹಿಸಿ ಸಹಕಾರ ನೀಡಬೇಕು’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ಹಿರಿಯ ಕಲಾವಿದರು, ಸಂಗೀತಗಾರರು, ರಂಗ ಕರ್ಮಿಗಳು, ಸಮಾಜ ಸೇವಕರು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ ತಿಳಿಸಿದರು.

ಉತ್ಸವದಲ್ಲಿ ಭಾವೈಕ್ಯ ಸಾರುವ ಲೋಗೊ ನಿರ್ಮಿಸಿ, ಸಾಮರಸ್ಯ ಉಂಟು ಮಾಡುವ ಕಾರ್ಯ ಈ ಕಾರ್ಯಕ್ರಮದಲ್ಲಿ ಆಗುವುದು ಸೂಕ್ತ ಎಂದು ಮುಖಂಡ ಅಯ್ಯೂಬ್‍ಖಾನ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಡಿವೈಎಸ್‍ಪಿ ಬಿ.ಎಸ್.ತಳವಾರ, ನಗರಸಭೆ ಪ್ರಭಾರ ಪೌರಾಯುಕ್ತೆ ಶೃತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.