ಮಾನ್ವಿ: ‘ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಯನ್ನು ಸರ್ಕಾರ ಏಕಕಾಲದಲ್ಲಿ ರಾಜ್ಯ ಸರ್ಕಾರಿ ನೌಕರರು ಎಂದು ಘೋಷಿಸಿ ಸೌಲಭ್ಯ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಖಜಾಂಚಿ ಆರ್.ಎಸ್.ಬಸವರಾಜ ಒತ್ತಾಯಿಸಿದರು.
ಪಟ್ಟಣದ ಈದ್ಗಾ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು ಸಂಯೋಜಿತ)ದ ಜಿಲ್ಲಾ ಸಮಿತಿ ಶನಿವಾರ ಹಮ್ಮಿಕೊಂಡಿದ್ದ 10ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 65 ಸಾವಿರ ಸಿಬ್ಬಂದಿ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ಸ್ವಚ್ಛತಾ ಕಾರ್ಯ ಸೇರಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಆದರೆ ಈ ಸಿಬ್ಬಂದಿಗೆ ಸರ್ಕಾರದಿಂದ ಇದುವರೆಗೂ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ’ ಎಂದರು.
‘ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುವ ಕರವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛತಾಗಾರರಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಕನಿಷ್ಟ ವೇತನ ₹31 ಸಾವಿರ ನಿಗದಿಗೊಳಿಸಬೇಕು. ನಿವೃತ್ತಿ ಹೊಂದಿದ ನೌಕರರಿಗೆ ಮಾಸಿಕವಾಗಿ ₹5 ಸಾವಿರ ಪಿಂಚಣಿ ನೀಡಬೇಕು. ನೌಕರರ ಕುಟುಂಬ ಸದಸ್ಯರಿಗೂ ಆರೋಗ್ಯ ವಿಮೆ ನೀಡಿ ₹50 ಸಾವಿರವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ನೀಡಬೇಕು. ಮರಣ ಹೊಂದಿದ ನೌಕರರ ಕುಟುಂಬ ಸದಸ್ಯರಿಗೆ ಅನುಕಂಪದ ವೇತನ ನೀಡಬೇಕು. ಪ್ರತಿ ತಿಂಗಳು 5ನೇ ತಾರೀಖಿಗೆ ವೇತನ ನೀಡಬೇಕು’ ಎಂದು ಒತ್ತಾಯಿಸಿದರು.
ಹಿರಿಯ ಕಾರ್ಮಿಕ ಹೋರಾಟಗಾರ ಮಾರುತಿ ಮಾನ್ಪಡೆ, ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಗೌರವಿಸಲಾಯಿತು.
ಸಿಐಟಿಯು ಜಿಲ್ಲಾ ಅಧ್ಯಕ್ಷೆ ಪದ್ಮಾ, ತಾಲ್ಲೂಕು ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ, ಪದಾಧಿಕಾರಿಗಳಾದ ಡಿ.ಎಸ್.ಶರಣಬಸವ, ಗಿರಿಯಪ್ಪ ಪೂಜಾರಿ, ಆಂಜನೇಯ ನಾಯಕ ಗೋರ್ಕಲ್, ಅಕ್ತರ್ ಪಾಷಾ, ಡಿ.ವೀರನಗೌಡ, ವೀರೇಶ, ಸುರೇಶ, ಅಂಬಣ್ಣ ನಾಯಕ, ಮಲ್ಲಿಕಾರ್ಜುನ, ಅಂಬಣ್ಣ ನಾಯಕ ಬ್ಯಾಗವಾಟ, ಬಸವರಾಜ ಗೌಡ, ಶರಣಬಸವ ಹರವಿ, ಆಂಜನೇಯ್ಯ ನಾಯಕ, ಬಸವರಾಜಗೌಡ, ಮೌನೇಶ ಮಟ್ಟೂರು, ಶಿವರಾಜ ಸ್ವಾಮಿ ಮಲ್ಕಾಪುರ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮೊದಲು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಈದ್ಗಾ ಫಂಕ್ಷನ್ ಹಾಲ್‌ವರೆಗೆ ಗ್ರಾಮ ಪಂಚಾಯಿತಿ ನೌಕರರು ಬೈಕ್ ರ‍್ಯಾಲಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.