ADVERTISEMENT

ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮೇ 2022, 11:11 IST
Last Updated 11 ಮೇ 2022, 11:11 IST
ಕವಿತಾಳ ಪಟ್ಟಣ ಪಂಚಾಯಿತಿ ಸದಸ್ಯರು ಮಂಗಳವಾರ ರಾಯಚೂರಿನ ಜಿಲ್ಲಾಡಳಿತ ಕಚೇರಿಗೆ ಮನವಿ ಸಲ್ಲಿಸಿದರು
ಕವಿತಾಳ ಪಟ್ಟಣ ಪಂಚಾಯಿತಿ ಸದಸ್ಯರು ಮಂಗಳವಾರ ರಾಯಚೂರಿನ ಜಿಲ್ಲಾಡಳಿತ ಕಚೇರಿಗೆ ಮನವಿ ಸಲ್ಲಿಸಿದರು   

ಪ್ರಜಾವಾಣಿ ವಾರ್ತೆ

ರಾಯಚೂರು: ಕವಿತಾಳ ಪಟ್ಟಣದ ಬೇಜವಾಬ್ದಾರಿ ಮುಖ್ಯಾಧಿಕಾರಿ ಹಾಗೂ ಸಹಾಯಕ ಎಂಜಿನಿಯರ್ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ಬೇರೆ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿ ಕವಿತಾಳ ಪಟ್ಟಣ ಪಂಚಾಯತಿ ಸದಸ್ಯರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕವಿತಾಳದ ಪ್ರತಿ ವಾರ್ಡ್‌ನಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ಚರಂಡಿ ಸ್ವಚ್ಛತೆ, ಶೌಚಾಲಯ, ರಸ್ತೆ ಇತರೆ ಮೂಲಸೌಕರ್ಯದಿಂದ ವಂಚಿತವಾಗಿದೆ. ಪಟ್ಟಣದಲ್ಲಿ ವಾರದ ದಿನ ಸಂತೆಯಲ್ಲಿ ಸುತ್ತಮುತ್ತಲಿನ 25ಕ್ಕೂ ಹೆಚ್ಚು ಹಳ್ಳಿಗಳಿಂದ ಜನರು ವ್ಯಾಪಾರ ವಹಿವಾಟಿಗೆ ಬರುತ್ತಾರೆ. ಶಿವಪ್ಪ ಮಠದ ಹತ್ತಿರದ ಹಳೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯ ಸಮರ್ಪಕವಾಗಿಲ್ಲ. ವಿದ್ಯುತ್ ದೀಪಗಳಿಲ್ಲದೆ ಜನಸಾಮಾನ್ಯರು, ಮಹಿಳೆಯರು ನಿತ್ಯ ರಾತ್ರಿ ನಡೆದಾಡಲು ಸಮಸ್ಯೆಯಾಗಿದೆ ಎಂದು ದೂರಿದರು.

ADVERTISEMENT

ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕಚೇರಿಗೂ ಸರಿಯಾಗಿ ಬರುತ್ತಿಲ್ಲ. ಮುಖ್ಯಾಧಿಕಾರಿ ಮತ್ತು ಸಹಾಯಕ ಎಂಜಿನಿಯರ್ (ಜೆಇ) ಮಲ್ಲಣ್ಣ ನೂತನವಾಗಿ ಆಯ್ಕೆಯಾದ ಯಾವೊಬ್ಬ ಪಟ್ಟಣ ಪಂಚಾಯಿತಿ ಸದಸ್ಯರ ಸಂಪರ್ಕಕ್ಕೆ ಸಿಗುತ್ತಿಲ್ಲ ಸಮಸ್ಯೆ ಹೇಳಿಕೊಂಡ ಬಂದ ಜನರಿಗೆ ಕುಂಟುನೆಪ ಹೇಳುತ್ತಿದ್ದಾರೆ. ಇಬ್ಬರು ಈ ಹಿಂದೆ ಶೌಚಾಲಯ ಹಗರಣದಲ್ಲಿ ಭಾಗಿಯಾದ ಬಗ್ಗೆ ಸಾಕ್ಷಿ ಸಮೇತ ದೂರು ನೀಡಿದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ ನಗನೂರು, ಮಲ್ಲಿಕಾರ್ಜುನ, ಎಲೀಜಾ, ಅಮರೇಶ ಕುರಿ, ರಾಘವೇಂದ್ರ, ಲಿಂಗರಾಜ ಕಂದಗಲ್, ಹುಲಿಗೆಪ್ಪ, ರಾಜಾರೇಶ್ವರಿ, ವಿ ರಾಮಾದೇವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.