ADVERTISEMENT

ರೈತರಿಗೆ ಫಸಲ್ ಬಿಮಾ ಯೋಜನೆ ಅಡಿ ಶೀಘ್ರವೇ ಪರಿಹಾರ ನೀಡಿ: ಚಾಮರಸ ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಮೇ 2025, 12:50 IST
Last Updated 31 ಮೇ 2025, 12:50 IST
ಚಾಮರಸ ಮಾಲಿಪಾಟೀಲ
ಚಾಮರಸ ಮಾಲಿಪಾಟೀಲ   

ಸಿರವಾರ: ‘ಬೆಳೆಹಾನಿಯಾದ ರೈತರಿಗೆ ಫಸಲ್ ಬಿಮಾ ಯೋಜನೆ ಅಡಿ ಶೀಘ್ರವೇ ಪರಿಹಾರ ನೀಡಬೇಕು. ಕೂಡಲೇ ಜೋಳ ಖರೀದಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಬೆಳೆಹಾನಿಯಾದರೆ ಅದಕ್ಕೆ ಪರಿಹಾರ ಬರಬೇಕು ಎಂಬ ಉದ್ದೇಶದಿಂದ ರೈತರು ಫಸಲ್ ಬಿಮಾ ಯೋಜನೆ ಅಡಿ ಹಣ ತುಂಬಿರುತ್ತಾರೆ. ಅಗತ್ಯ ದಾಖಲೆ ನೀಡಿ ಹಾನಿ ಬಗ್ಗೆ ಮಾಹಿತಿ ನೀಡಿದ್ದರೂ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್‌ ಗೇಟ್‌ಗಳನ್ನು ಅಳವಡಿಸಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ನಿವಾಸದ ಮುಂದೆ ಧರಣಿ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಜೂನ್ 13ರಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ‘ತುಂಗಭದ್ರಾ ಎಡದಂಡೆ ಹಾಗೂ ನಾರಾಯಣಪುರ ಬಲ ಮತ್ತು ಎಡದಂಡೆ ನಾಲೆಯ ಸಮಸ್ಯೆಗಳು ಮತ್ತು ಪರಿಹಾರ’ದ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಸೂಗೂರಯ್ಯ ಆರ್.ಎಸ್.ಮಠ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಶಂಕರಪ್ಪಗೌಡ, ಬಸವರಾಜ ನವಲಕಲ್, ಆದೆಪ್ಪ ಕುರಕುಂದ, ಹಾಜಿ ಮಸ್ತಾನ್, ಮಲ್ಲಣ್ಣ ಗೌಡೂರು, ಸಿದ್ದಯ್ಯ ಸ್ವಾಮಿ ಸೇರಿ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

ಸಿರವಾರದಲ್ಲಿ ಶನಿವಾರ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆಹಾನಿಯಾದ ರೈತರಿಗೆ ಶೀಘ್ರವಾಗಿ ಪರಿಹಾರವನ್ನು ಒದಗಿಸಬೇಕು ಮತ್ತು ಜೋಳ ಖರೀದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.