ADVERTISEMENT

ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

ರೈತ ಸಂಘದಿಂದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 5:13 IST
Last Updated 8 ನವೆಂಬರ್ 2020, 5:13 IST
ಸಿಂಧನೂರಿನ ಮಿನಿವಿಧಾನಸೌಧ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿತು
ಸಿಂಧನೂರಿನ ಮಿನಿವಿಧಾನಸೌಧ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿತು   

ಸಿಂಧನೂರು: ಜಿಲ್ಲೆಯಾದ್ಯಂತ ಭತ್ತ ಮತ್ತು ಹತ್ತಿ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದಿಂದ ಸ್ಥಳೀಯ ಪ್ರವಾಸಿ ಮಂದಿರದಿಂದ ಮಿನಿವಿಧಾನಸೌಧ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಹವಾಮಾನ ವೈಫರೀತ್ಯ, ವಿಪರೀತ ಮಳೆ, ಸಮರ್ಪಕವಾಗಿ ಪೂರೈಕೆಯಾಗದ ವಿದ್ಯುತ್, ಭತ್ತ ಕೊಯ್ಯುವ ಯಂತ್ರಕ್ಕೆ ದುಬಾರಿ ಬಾಡಿಗೆ ಮತ್ತು ಬೆಳೆದ ಬೆಳೆಗೆ ಮಾರುಕಟ್ಟೆ, ಬೆಂಬಲ ಬೆಲೆ ಇಲ್ಲದಿರುವುದರಿಂದ ಜಿಲ್ಲೆಯ ರೈತರು ಕಂಗಾಲಾಗಿ ಸಾಗುವಳಿ ಬಿಟ್ಟು ಉದ್ಯೋಗ ಅರಸಿಕೊಂಡು ಮಹಾನಗರಗಳಿಗೆ ಗುಳೆ ಹೋಗುವ ಸ್ಥಿತಿ ಎದುರಾಗಿದೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಹೇಳಿದರು.

ಇಂತಹ ಸಂದರ್ಭದಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ಕೃಷಿಭೂಮಿ ಒಪ್ಪಿಸುವ ಮತ್ತು ರೈತರಿಗೆ ಮರಣ ಶಾಸನವಾಗಿರುವ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವುದು ಖಂಡನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಹೋಬಳಿಗೊಂದರಂತೆ ಭತ್ತ ಮತ್ತು ಹತ್ತಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಕೇಂದ್ರಗಳಲ್ಲಿ ರೈತರ ಬೆಳೆಯನ್ನು ಖರೀದಿಸಲು ಯಾವುದೇ ನಿರ್ಬಂಧ ಹೇರಬಾರದು. ವಾರದೊಳಗೆ ಖರೀದಿಸಿದ ಬೆಳೆಗೆ ಮೊತ್ತ ಪಾವತಿಸಬೇಕು. ಸುಗ್ರೀವಾಜ್ಞೆ ಹಿಂಪಡೆಯಲು ಸಮಗ್ರ ರೈತರ ಪರವಾಗಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ತ್ರಿಫೇಸ್ ವಿದ್ಯುತ್ ನಿರಂತರವಾಗಿ 12 ಗಂಟೆಗಳ ಕಾಲ ಪೂರೈಸಬೇಕು. ಭತ್ತ ಕೊಯ್ಯುವ ಯಂತ್ರಕ್ಕೆ ₹ 1800 ಬಾಡಿಗೆ ನಿಗದಿಪಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು. ಉಪನೊಂದಣಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕೆಂದು ಆಗ್ರಹಿಸಿದರು.

ಶಿರಸ್ತೇದಾರ್ ಗುರುರಾಜ್ ಮನವಿ ಪತ್ರ ಸ್ವೀಕರಿಸಿದರು.

ಪಿ.ಹುಲಗಯ್ಯ ತಿಮ್ಮಾಪುರ, ಶಿವರಾಜ ಸಾಸಲಮರಿ, ಸಲೀಂ ಪಾಟೀಲ್ ಹಟ್ಟಿ, ಶ್ಯಾಮೀದಸಾಬ, ದೇವಣ್ಣ, ನಾಗರಾಜ್, ರಮೇಶ ಧುಮತಿ, ರಮೇಶ ಪುಲದಿನ್ನಿ, ಆದಪ್ಪ, ಬಸಪ್ಪ, ಮಲ್ಲಯ್ಯ ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.