ಲಿಂಗಸುಗೂರು: ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಲಿಂಗಸುಗೂರು ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಪಟ್ಟಣದ ರಾಯಚೂರು, ಮುದಗಲ್, ಕಲಬುರಗಿ, ಬೆಂಗಳೂರು ಬೈಪಾಸ್ ರಸ್ತೆ, ಕರಡಕಲ್ ರಸ್ತೆ ಬದಿ ಕಸದ ರಾಶಿಗಳು ರಾರಾಜಿಸುತ್ತಿವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಎದುರಲ್ಲೇ ಕಸದ ರಾಶಿ ತಲೆ ಎತ್ತಿದೆ. ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೊಗಳು 8-10 ದಿನಗಳಿಗೊಮ್ಮೆ ಬರುತ್ತಿವೆ. ಹತ್ತು ದಿನಗಳವರೆಗೆ ಒಣ ಮತ್ತು ಹಸಿ ಕಸ ಮನೆಯಲ್ಲಿ ಇಟ್ಟುಕೊಳ್ಳಲಾಗದೆ ಅನಿವಾರ್ಯವಾಗಿ ಎಲ್ಲಂದರಲ್ಲಿ ಹಾಕುತ್ತಿದ್ದಾರೆ ಎಂದು ದೂರಿದರು.
ಪಟ್ಟಣದ ಸುಣಗಾರ ಗಲ್ಲಿ, ಗೌಳಿಪುರ, ಸಂತೆಬಜಾರ್, ಜನತಾ ಕಾಲೊನಿ ಸೇರಿದಂತೆ ಅನೇಕ ಬಡಾವಣೆಗಳಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಪರಿಣಾಮ ನೀರು ಅಲ್ಲೇ ಮಡುಗಟ್ಟಿ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಕೆಲ ಕಡೆ ಬೀದಿ ದೀಪಗಳು ಉರಿಯುತ್ತಿಲ್ಲ. ಇದರಿಂದ ಕತ್ತಲು ಆವರಿಸಿ ರಾತ್ರಿ ವೇಳೆ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈಗಾಗಿ ಹೊಸದಾಗಿ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತ ನಾಯಕ, ಪ್ರವೀಣಕುಮಾರ, ಪ್ರಕಾಶ ಕುರಿ, ನಿಂಗಪ್ಪ, ಶರಣಗೌಡ, ರಾಯಪ್ಪ ನಾಯಕ, ಮೊಹಿನುದ್ದೀನ್, ಮಲ್ಲೇಶ ನಾಯಕ, ಶಿವರಾಜ, ಮಲ್ಲೇಶ ಪೋಳ, ಅಮರೇಗೌಡ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.